ಆದ್ಯತೆ ಮೇರೆಗೆ ನರೇಗಾ ಕೂಲಿಕಾರರಿಗೆ ಕೆಲಸ ನೀಡಿ: ಜಿಪಂ ಸಿಇಒ

ಹುಲಸೂರ:ಮೇ.16: ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಕೂಲಿ ಕೆಲಸ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಹೀರಾ ನಸೀಂ ಹೇಳಿದರು.

ಸಚಿವ ಪ್ರಭು ಚವ್ಹಾಣ ಅವರೊಂದಿಗೆ ಶನಿವಾರ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹುಲಸೂರ ತಾಪಂ ನರೇಗಾ ಸಹಾಯಕ ನಿರ್ದೇಶಕ ಜಯಪ್ರಕಾಶ್ ಚವ್ಹಾಣ ಅವರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕಾಮಗಾರಿಗಳಾದ ತೆರೆದ ಬಾವಿ, ಬದು ನಿರ್ಮಾಣ, ಜಾನುವಾರು ಕೊಟ್ಟಿಗೆ ಮುಂತಾದವುಗಳ ಮೇಲೆ ಹೆಚ್ಚು ಗಮನ ಹರಿಸಿ ಆದ್ಯತೆ ಮೇರೆಗೆ ಕೆಲಸ ನೀಡಲು ಸೂಚಿಸಿದರು.

ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ. ಕರೊನಾ ಹರಡುವಿಕೆ ತಡೆಗಾಗಿ ವಲಸಿಗರ ಮೇಲೆ ನಿಗಾ ಇಟ್ಟು ಅವರ ತಪಾಸಣೆ ಮಾಡಿ ಕೈ ಮೇಲೆ ಮುದ್ರೆ ಹಾಕಿ. ಹೋಮ್ ಕ್ವಾರಂಟೈನ್ ಬಿಗಿಗೊಳಿಸಿ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಲಿ, ಹುಲಸೂರ ಪಿಡಿಒ ಭೀಮಶೆಪ್ಪ ದಂಡೀನ್, ತಾಲ್ಲೂಕು ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ್ ನಾವದಗಿ ಹಾಗೂ ತಾಲ್ಲೂಕು ಐಇಸಿ ಸಂಯೋಜಕ ಗಣಪತಿ ಹರಕೂಡೆ ಇದ್ದರು.