ಆದ್ಯತಾ ವಲಯದವರಿಗೆ ವ್ಯಾಕ್ಸಿನ್ ನೀಡಲು ಪಟ್ಟಿ ನೀಡಿ: ಡಿಸಿ

ರಾಯಚೂರು, ಜೂ.೦೩- ಪ್ರಸ್ತುತ ಕೋವಿಡ್ ವ್ಯಾಕ್ಸಿನ್ ನೀಡಲು ಗುರುತಿಸಲಾಗಿರುವ ಆದ್ಯತಾ ವಲಯದ ಗುಂಪಿನಲ್ಲಿ ಬರುವ ೧೮ ರಿಂದ ೪೪ ವರ್ಷದೊಳಗಿನ ಫಲಾನುಭವಿಗಳಿಗೆ ಆಂದೋಲನದ ಮಾದರಿಯಲ್ಲಿ ಚುಚ್ಚುಮದ್ದು ನೀಡಲು ಕೂಡಲೇ ಪಟ್ಟಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆದ್ಯತಾ ವಲಯದ ಫಲಾನುಭವಿಗಳಿಗೆ ಲಸಿಕಾಕರಣ ಕುರಿತಂತೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗ ಗುರುತಿಸಲಾಗಿರುವ ಆದ್ಯತಾ ವಲಯದ ಗುಂಪಿನವರು, ವಿವಿಧ ರೀತಿಯ ವ್ಯವಹಾರಗಳ ಸಂದರ್ಭಗಳಲ್ಲಿ ಜನ ಸಾಮಾನ್ಯರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಾರೆ, ಅವರೊಂದಿಗೆ ವ್ಯವಹರಿಸುವ ಸಮಯದಲ್ಲಿ ಕೋವಿಡ್ ಪ್ರಸಾರವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ, ಹಾಗಾಗಿ ಸರ್ಕಾರ ಅವರೆಲ್ಲರಿಗೂ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನ್ ನೀಡುವಂತೆ ನಿರ್ದೇಶನ ನೀಡಿದ್ದು, ಇಂಜೆಕ್ಷನ್‌ಗಳನ್ನು ಪೂರೈಸುತ್ತಿದೆ, ಜಿಲ್ಲೆಗೆ ೧೦ ಸಾವಿರ ವೈಲ್ಸ್ ಕೋವಿಡ್ ವ್ಯಾಕ್ಸಿನ್‌ಗಳು ಬಂದಿದ್ದು, ಕೂಡಲೇ ವಿಕಲಚೇತನ, ಆಹಾರ ಮತ್ತು ನಾಗರೀಕ ಪೂರೈಕೆ, ಕೃಷಿ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಬ್ಯಾಂಕುಗಳು, ಸಾರಿಗೆ, ಜೆಸ್ಕಾಂ, ಕಾರ್ಮಿಕ ಇಲಾಖೆ, ಕಟ್ಟಡ ನಿರ್ಮಾಣ ಕಾರ್ಯ ನಿರ್ವಹಿಸುವವರು, ಕಿರಾಣಿ ಅಂಗಡಿ ಕೆಲಸಗಾರರು, ಅದರ ಮಾಲೀಕರು ಸೇರಿದಂತೆ ನೇರವಾಗಿ ಸಾರ್ವಜನಿಕರ ಸಂಪರ್ಕಕ್ಕೆ ಬರುವರ ಪಟ್ಟಿಯನ್ನು ಕೂಡಲೇ ಒದಗಿಸಬೇಕು ಎಂದರು.
ಬಾರ್ ಅಸೋಸಿಯೇಷನ್ ಸದಸ್ಯರು, ಹಮಾಲರು, ಹಾಲು ಸಹಕಾರ ಸಂಘಗಳ ಸಿಬ್ಬಂದಿಗಳು, ಪ್ರಾಥಮಿಕ ಕೃಷಿ ಸಹಕಾರ ಸೊಸೈಟಿಗಳು, ಕೇಬಲ್ ಆಪರೇಟರ್‌ಗಳು, ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಖಾಸಗಿ ಟೆಲಿಕಾಂ ಸಿಬ್ಬಂದಿಗಳು, ಇಂಟರ್‌ನೆಟ್ ಸೇವಾದಾರರು, ಆಟೋ ಡ್ರೈವರ್‌ಗಳು ಸೇರಿದಂತೆ ಆದ್ಯತಾ ವಲಯಕ್ಕೆ ಬರುವವರ ಪಟ್ಟಿ ಒದಗಿಸಿ, ಅದರಂತೆ ಅವರೆಲ್ಲರಿಗೂ ವ್ಯಾಕ್ಸಿನ್ ಕೊಡಿಸಬೇಕು ಎಂದರು.
ಇವರೆಲ್ಲರಿಗೂ ಇಂಜೆಕ್ಷನ್ ಕೊಡಿಸಲು ಮೊದಲು ಉತ್ತಮ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು, ಸಾಧ್ಯವಾದಷ್ಟು ಜನರನ್ನು ಒಗ್ಗೂಡಿಸಿಕೊಂಡು ನಗರ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆ ಅಥವಾ ದೊಡ್ಡ ಸಮುದಾಯ ಭವನಗಳು ಅಥವಾ ದೊಡ್ಡ ಶಾಲೆ, ಕಾಲೇಜುಗಳಲ್ಲಿ ಆರ್‌ಸಿಎಚ್ ಅಧಿಕಾರಿಗಳ ಸಮನ್ವಯದೊಂದಿಗೆ ಅವರಿಗೆ ವ್ಯಾಕ್ಸಿನ್ ಕೊಡಿಸಬೇಕು ಎಂದು ಸೂಚಿಸಿದರು.
ಮೊದಲಿಗೆ ಇವರೆಲ್ಲರಿಗೂ ಕೋವಿಡ್ ವ್ಯಾಕ್ಸಿನ್ ಕೊಡಿಸಿದ್ದಲ್ಲೀ ಸೋಂಕಿನ ಸರಪಳಿಯನ್ನು ತುಂಡರಿಸಬಹುದು, ಇಲ್ಲದಿದ್ದಲ್ಲೀ ಇವರು ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಮುಟ್ಟುವುದು ಅಥವಾ ಹಣ ನೀಡುವಾಗ ಮತ್ತು ಪಡೆಯುವ ಸಂದರ್ಭಗಳಲ್ಲಿ ಸೋಂಕು ಹರಡಬಹುದು ಆದ ಕಾರಣ ಈ ಆದ್ಯತಾ ವಲಯದವರಿಗೆ ಕೂಡಲೇ ವ್ಯಾಕ್ಸಿನ್ ಕೊಡಿಸಬೇಕು, ಏನೇ ಸಮಸ್ಯೆಗಳಿದ್ದರೂ ನೋಡಲ್ ಅಧಿಕಾರಿಯಾದ ಎಡಿಸಿ ದುರುಗೇಶ್ ಹಾಗೂ ಆರ್‌ಸಿಎಚ್ ಅಧಿಕಾರಿ ಡಾ. ವಿಜಯ ಅವರನ್ನು ಸಂಪರ್ಕಿಸಬೇಕು ಎಂದು ನುಡಿದರು.
ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ಆರ್‌ಸಿಎಚ್ ಅಧಿಕಾರಿ ಡಾ. ವಿಜಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ ಅಲಿ, ಆಹಾರ ಮತ್ತು ನಾಗರೀಕರ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಬಳಗಾನೂರು, ಡಿಡಿಪಿಯು, ಡಿಡಿಪಿಐ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.