ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನ

ವಿಜಯಪುರ.ಮೇ.೧೩-ಹಿಂದೂ ಧರ್ಮದಲ್ಲಿ ಆದಿ ಗುರು ಶಂಕರಾಚಾರ್ಯರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ ಎಂದು ಶಿಕ್ಷಕ ವಿಜಯಕುಮಾರ್ ಹೇಳಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ವಿಪ್ರ ಸಮಾಜದ ಬಂಧುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಅನೇಕ ನಂಬಿಕೆಗಳ ಪ್ರಕಾರ, ಶ್ರೀ ಆದಿ ಶಂಕರಾಚಾರ್ಯರನ್ನು ಸಹ ಭಗವಾನ್ ಶಿವನ ಅವತಾರವೆಂದು ಪರಿಗಣಿಸಲಾಗಿದೆ. ಅವರ ಜೀವನವು ಮನುಕುಲಕ್ಕೆ ಸ್ಫೂರ್ತಿಯ ಮೂಲವಾಗಿದೆ. ಅವರ ಸಿದ್ಧಾಂತಗಳು ಮನುಷ್ಯನ ಬದುಕನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
ಆದಿ ಗುರು ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಕೇರಳದ ಕೆಳದಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶಿವಗುರು ಮತ್ತು ತಾಯಿಯ ಹೆಸರು ಆಯಾಂಬಾ. ಶಂಕರಾಚಾರ್ಯರ ತಂದೆಯಾದ ಶಿವಗುರುಗಳು ಧರ್ಮಗ್ರಂಥಗಳಲ್ಲಿ ಪರಿಣತರಾಗಿದ್ದರು ಮತ್ತು ಅವರು ತಮ್ಮ ಮಗನಿಗೆ ಶಂಕರ ಎಂದು ಹೆಸರಿಸಿದರು ಎಂದರು,
ಕಾರ್ಯಕ್ರಮದಲ್ಲಿ ಪುರಸಭೆಯ ಪರಿಸರ ಅಭಿಯಂತರ ಶೇಖರ್ ಮಾತನಾಡಿ . ಅವರು ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಸನ್ಯಾಸಿಯಾದರು. ಅವರು ಕೇವಲ ೩೨ ನೇ ವಯಸ್ಸಿನಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ಪ್ರಾಚೀನ ಭಾರತೀಯ ಉಪನಿಷತ್ತುಗಳ ತತ್ವಗಳು ಮತ್ತು ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಆದಿ ಶಂಕರಾಚಾರ್ಯರು ಕೆಲಸ ಮಾಡಿದರು. ಅದಲ್ಲದೆ ಅದ್ವೈತ ಸಿದ್ಧಾಂತ ವೇದಾಂತ ತತ್ವವನ್ನು ಆದ್ಯತೆ ಮೇಲೆ ಸ್ಥಾಪಿಸಿದರು. ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ಮೂಢ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದರು. ಶತಮಾನಗಳಿಂದ ಪಂಡಿತರು ಧರ್ಮಗ್ರಂಥಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಆದಿ ಶಂಕರಾಚಾರ್ಯರು ಮಾಡಿದರು. ಇಂದು ಶಂಕರಾಚಾರ್ಯರನ್ನು ಕಾಲಕಾಲಕ್ಕೂ ಪೂಜಿಸಿಕೊಂಡು ಸ್ಮರಿಸಿಕೊಂಡು ಬರಲಾಗಿದೆ ಎಂದರು.
ವೇದಬ್ರಹ್ಮ ಬಾಲಾಜಿ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಪ್ರಬಂಧಗಳಿಂದ ವೇದಘೋಷ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ವಿಪ್ರಬಂಧಗಳಾದ ಎಸ್ ಗೋವಿಂದ್ ರಾವ್, ನಾಗೇಶ್, ರಘುನಾಥ್, ರಾಮಮೂರ್ತಿ, ಸೂಲಿನಾರಾಯಣ ಬಾಬು, ಎಸ್.ಸತೀಶ ಕುಮಾರ್. ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ವೀಣಾ ಪ್ರಕಾಶ್. ಗಾಯತ್ರಿ ಜಗದೀಶ್, ಪುರಸಭೆಯ ಪವನ್ ಜೋಶಿ ಮಂಜುನಾಥ್. ಅಡಿಗೆ ಗೋಪಾಲ್ ಇನ್ನು ಹಾಜರಿದ್ದರು.