
ಕಲಬುರಗಿ.ಮೇ.24: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುಂಗಾರು ಬಿತ್ತನೆಯ ನಿಮಿತ್ಯ ಸಕಾಲಕ್ಕೆ ಮಳೆ ಬೆಳೆಯಾಗಲಿ ಎಂದು ಮೇ 25ರಂದು ಬೆಳಿಗ್ಗೆ 6 ಗಂಟೆಗೆ ಗ್ರಾಮ ದೇವತೆ ಆದಿಶಕ್ತಿ ಡೊಂಗರದೇವಿಯ ಮಹಾರುದ್ರಾಭಿಷೇಕ ಮಾಡಲಾಗುತ್ತದೆ ಎಂದು ಗ್ರಾಮದ ಭಕ್ತಾಧಿಗಳಾದ ರಾಜಶೇಖರ್ ರಾಜೇಶ್ವರ್, ಶಿವಾನಂದ್ ಇಟಗಿ, ಮಾಣಿಕಪ್ಪ ಜನಕಟ್ಟಿ, ಅಂಬಾರಾಯ್ ಲಗಶೆಟ್ಟಿ, ಭೋಜಪ್ಪ ರಾಜೇಶ್ವರ್, ಸೂರ್ಯಕಾಂತ್ ಡೊಂಗರಗಾಂವ್ ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕುಂಬಮೇಳ, ಮುತೈದೆಯರ ಮೆರವಣಿಗೆಯ ಮೂಲಕ ಭಜನೆ ಸಹ ನೆರವೇರಲಿದೆ. ರೈತರು ಬೆಳೆಯುವ ಧವಸ ಧಾನ್ಯಗಳು ಹೆಚ್ಚಾಗಿ ಬೆಳೆಯಲೆಂದು, ಅವುಗಳಿಗೆ ಯಾವುದೇ ರೋಗ, ರುಜಿನಿಗಳು ಬಾರದಂತೆ ಮತ್ತು ಸಮಸ್ತ ನಾಡಿನ ಜನತೆಗೆ, ಸಕಲ ಕೋಟಿ ಜೀವ ರಾಶಿಗಳಿಗೆ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಆರೋಗ್ಯ ಭಾಗ್ಯ ನೀಡಲಿ ಎಂದು ಬೇಡಿಕೊಳ್ಳಲು ಹಮ್ಮಿಕೊಂಡಿರುವ ಮಹಾರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಅವರು ಕೋರಿದ್ದಾರೆ.