
ನವದಹಲಿ, ಜು.21- ಆದಿವಾಸಿ ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆ ಯಾಗುವ ಮೂಲಕ ದೇಶದಲ್ಲಿ ಹೊಸ ಇತಿಹಾಸ ಸೃಷ್ಠಿ ಮಾಡಿದ್ದಾರೆ.
ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದ್ರೌಪದಿ ಮುರ್ಮು ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ.
ನಡೆದ ಬಂದ ಹಾದಿ:
ಒಡಿಶಾದ ಮಯೂರ್ ಬಂಜ್ ಜಿಲ್ಲೆಯ ಉಪರ್ ಬೇಡ ಗ್ರಾಮದಲ್ಲಿ 1958ರ ಜೂನ್ 20ರಂದು ಸಂತಾಲಿ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿ ಪಡೆದಿರುವ ದ್ರೌಪದಿ ಮುರ್ಮು, ರಾಜಕೀಯ ಪ್ರವೇಶಿಸುವ ಮುನ್ನ ರೈರಂಗಪುರದಲ್ಲಿನ ಶ್ರೀಅರವಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.
1997ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿ 2000 ಇಸವಿಯಲ್ಲಿ ರೈರಂಗಪುರದಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು.
ಬಳಿಕ ಬಿಜೆಪಿಯ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2000ನೇ ಇಸವಿಯಲ್ಲಿ ರೈರಂಗಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ 2000 ಇಸವಿಯಲ್ಲಿ ಸಾರಿಗೆ ಮತ್ತು ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು. 2002ರಿಂದ ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು.
2007ರಲ್ಲಿ ಒಡಿಶಾದ ವಿಧಾನಸಭೆ ವತಿಯಿಂದ ನೀಡುವ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನೂ ಮುರ್ಮು ಅವರು ತನ್ನದಾಗಿಸಿಕೊಂಡಿದ್ದರು.
ದುರಂತರ ಸರಮಾಲೆ:
ಒಂದು ಕಡೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಸಾಗುತ್ತಿದ್ದ ದ್ರೌಪದಿ ಮುರ್ಮು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತೊಂದರೆಗೆ
ಸಿಲುಕುವಂತಾಯಿತು. 2014ರಲ್ಲಿ ಪತಿ ಶಾಮಚಂದ್ರ ಮುರ್ಮು ನಿಧನ ಹೊಂದಿದರೆ, ಇಬ್ಬರು ಗಂಡು ಮಕ್ಕಳು ಸಹ ಅಕಾಲಿಕ ಮರಣ ಹೊಂದಿ ದುರಂತದ ಸರಮಾಲೆ ಎದುರಿಸುವಂತಾಯಿತು.
2015ರ ಮೇ 18ರಂದು ಜಾರ್ಖಂಡ್ ನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದ ಅವರು, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಜ್ಯಪಾಲರ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.
ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು.
64 ವರ್ಷದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ – ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನ ಅಚ್ಚರಿ ಪಡುವಂತೆ ಮಾಡಿದ್ದರು.
ದ್ರೌಪದಿ ಮುರ್ಮು ಅವರು ದೇಶದ 15ನೇಯ ಪ್ರಥಮ ಪ್ರಜೆಯಾಗಿ ಆಯ್ಕೆ ಆಗುವ ಮೂಲಕ 2ನೇ ಮಹಿಳೆ ಹಾಗೂ ಬುಡಕಟ್ಟು ಸಮುದಾಯ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.