ಆದಿವಾಸಿಗಳೇ ನಿಜವಾದ ಮೂಲ ನಿವಾಸಿಗಳು: ಈಶ್ವರ ಖಂಡ್ರೆ

ಬೀದರ್, ಆ.11: ಆದಿವಾಸಿಗಳೇ ನಿಜವಾದ ಮೂಲ ನಿವಾಸಿಗಳು. ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದರೂ, ಸರ್ಕಾರದ ಹಲವಾರು ಪ್ರಯತ್ನಗಳ ಹೊರತಾಗಿಯೂ ಆದಿವಾಸಿಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಉತ್ತಮವಾಗದಿರುವುದು ನೋವಿನ ಸಂಗತಿ, ಈ ನಿಟ್ಟಿನಲ್ಲಿ ಸರ್ಕಾರ ಅವರ ಸರ್ವತೋಮುಖ ಏಳಿಗೆಗೆ ಶಕ್ತಿ ಮೀರಿ ಶ್ರಮಿಸಲಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ 29ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಇತ್ತೀಚೆಗೆ ಕಬಿನಿ, ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದಾಗ, ಆದಿವಾಸಿಗಳ ಮನೆಗಳಿಗೆ ಭೇಟಿ ನೀಡಿ ಮಾತನಾಡಿದ್ದು, ಅವರ ಸ್ಥಿತಿ-ಗತಿಯನ್ನು ಅರಿತಿರುವುದಾಗಿ ತಿಳಿಸಿದರು.
1978ಕ್ಕೆ ಮೊದಲು ನಿಯಮಾನುಸಾರ ಅರಣ್ಯವಾಸಿಗಳಾಗಿದ್ದ ಮೂಲ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯಡಿ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಅರಣ್ಯ ಸಚಿವನಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಈ ಸಂಬಂಧ ಶೀಘ್ರವೇ ಸಭೆ ಕರೆಯುವುದಾಗಿ ಹೇಳಿದರು.
ಸರ್ಕಾರ ಆದಿವಾಸಿಗಳ ಸಮಸ್ಯೆಗೆ ಸ್ಪಂದಿಸುತ್ತದೆ. ಏನೇ ಸಮಸ್ಯೆ ಇದ್ದರೂ ಕಾನೂನು ಚೌಕಟ್ಟಿನೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತದೆ. ಇದರ ಜೊತೆಗೆ ನಮ್ಮ ಅರಣ್ಯಗಳಲ್ಲಿ ಅಂದರೆ ನಾಗರಹೊಳೆ ಇರಬಹುದು, ದಾಂಡೇಲಿ ಅರಣ್ಯ ಇರಬಹುದು, ಪಶ್ಚಿಮ ಘಟ್ಟಗಳೆ ಇರಬಹುದು ಅಥವಾ ಬಂಡಿಪುರ, ತಿತಿಮತಿ ಯಾವುದೇ ಅರಣ್ಯ ಪ್ರದೇಶಗಳಲ್ಲಿ ಆದಿವಾಸಿಗಳನ್ನು ಆನೆ ಕಾರ್ಯಪಡೆಗಳಿಗೆ ಮತ್ತು ಕಳ್ಳಬೇಟೆ ತಡೆ ಶಿಬಿರಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕಾಡಿನಲ್ಲಿ ಬೆಳೆಯುವ ಲಾಂಟಾಣ ಕಳೆಯನ್ನು ತೆಗೆಯಲು ಅವರ ನೆರವು ಪಡೆಯುತ್ತಿದ್ದು, ಅವರಿಗೂ ಜೀವನೋಪಾಯ ಕಲ್ಪಿಸಲಾಗುತ್ತಿದೆ ಎಂದರು.
ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಾರೆ. ಕಿರುಕುಳ ನೀಡುತ್ತಿದ್ದಾರೆ ಎಂಬ ಕೆಲವು ದೂರುಗಳು ಬಂದಿದ್ದು, ಆದಿವಾಸಿಗಳ ಜೀವನೋಪಾಯಕ್ಕೆ ಅನಗತ್ಯವಾಗಿ ತೊಡಕುಂಟು ಮಾಡದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಆದಿವಾಸಿಗಳ ಮಕ್ಕಳೂ ಶಿಕ್ಷಿತರಾಗಿ, ಎಂಜಿನಿಯರ್, ಡಾಕ್ಟರ್, ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಯಸಶ್ವಿಯಾಗಿ ಉನ್ನತಾಧಿಕಾರಿಗಳಾಗಬೇಕು. ಇದಕ್ಕೆ ಸೂಕ್ತ ವಾತಾವರಣ ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ತಿಂಥಿಣಿಯ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ, ಚಿತ್ರನಟ ಚೇತನ್, ಬೀದರ್ ನ ಬುಡಕಟ್ಟು ಸಮುದಾಯದ ಹೋರಾಟಗಾರ ಅಮೃತರಾವ್ ಚಿಮ್ ಕೋಡ್ ಹಾಗೂ ವಕೀಲ ಮಹಾಂತೇಶ ಎಸ್ ಕೌಲಗಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಅಧ್ಯಕ್ಷ ಎಂ. ಕೃಷ್ಣಯ್ಯ ಮತ್ತಿತರ ಗಣ್ಯರು ಹಾಜರಿದ್ದರು.