ಬೆಂಗಳೂರು,ಜೂ.೧೩- ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ “ಆದಿಪುರುಷ್” ಚಿತ್ರದ ಕರ್ನಾಟಕ ವಿತರಣೆಯ ಜವಾಬ್ದಾರಿ ಪ್ರತಿಷ್ಠಿತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಪಾಲಾಗಿದೆ.
ಕೆ.ಜಿ.ಎಫ್ ೧,ಕೆ.ಜಿ.ಎಫ್ ೨, ಕಾಂತಾರ, ಚಾರ್ಲಿ ೭೭೭, ಗಂಧದಗುಡಿ, ವಕೀಲ್ ಸಾಬ್ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿ ಯಶಸ್ಸು ಕಂಡ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದೀಗ ಆದಿಪುರುಷ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. .
ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆ ಆಧಿರಿಸಿ ತಯಾರಿಸಿರುವ ಚಿತ್ರ ಆದಿಪುರುಷ್. ಟಿ. ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಮಾಡಿದ್ದಾರೆ.
ಆದಿಪುರುಷ್ ಚಿತ್ರ ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್, ಕ್ರಿತಿ ಸನೋನ್ , ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ವಿತರಣೆ ಕುರಿತು ಪ್ರತಿಕ್ರಿಯೆ ನೀಡಿರುವ ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಹಾಗು ಯೋಗಿ ಜಿ ರಾಜ್ ಅವರು “ಆದಿಪುರುಷ್ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ ಎಂದಿದ್ದಾರೆ.
ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ್ ಚಿತ್ರ ಮಾಡಲಾಗಿದೆ. ಈ ಚಿತ್ರ ನಟ ಪ್ರಭಾಸ್ ಮತ್ತು ಕೆ.ಆರ್.ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ. ಆದಿಪುರುಷ್ ಚಿತ್ರ ಜೂನ್ ೧೬ ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ ಎಂದಿದ್ಧಾರೆ.