ಆದಿತ್ಯ-ಎಲ್1 ಬೆಂಗಳೂರಿನಿಂದ ಶ್ರೀಹರಿಕೋಟಾಗೆ ರವಾನೆ

ಬೆಂಗಳೂರು, ಆ.೧೪- ಒಂದೆಡೆ ಚಂದ್ರಯಾನ-೩ರ ಮೂಲಕ ಮತ್ತೊಮ್ಮೆ ಜಾಗತಿಕ ಬ್ಯಾಹ್ಮಾಕಾಶ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇಸ್ರೋ ಇದೀಗ ಚಂದ್ರನ ಅಂಗಳಕ್ಕೆ ಲ್ಯಾಂಡ್ ಮಾಡುವ ನಿರೀಕ್ಷೆಯಲ್ಲಿದ್ದರೆ ಮತ್ತೊಂದೆಡೆ ಸೂರ್ಯನೆಡೆಗೆ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್೧ ಉಪಗ್ರಹ ಈಗಾಗಲೇ ಬೆಂಗಳೂರಿನಿಂದ ಶ್ರೀಹರಿಕೋಟಾದಲ್ಲಿನ ಉಡಾವಣಾ ಕೇಂದ್ರಕ್ಕೆ ಆಗಮಿಸಿದೆ.
ಆಗಸ್ಟ್ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಭಾರತದ ಮೊಟ್ಟ ಮೊದಲ ಸೌರ ಮಿಷನ್ ಆದಿತ್ಯ-ಎಲ್೧ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಒಂದೆಡೆ ಇಸ್ರೋ ಚಂದ್ರಯಾನ-೩ರನ್ನು ಚಂದ್ರನ ಅಂಗಲಕ್ಕೆ ಲ್ಯಾಂಡಿಂಗ್ ಮಾಡುವ ಸಿದ್ಧತೆ ವಹಿಸುತ್ತಿದ್ದರೆ ಮತ್ತೊಂದೆಡೆ ಸೌರ ಮಿಷನ್ ಸಿದ್ಧತೆಯನ್ನು ಕೂಡ ಭರದಿಂದ ನಡೆಸುತ್ತಿದೆ. ಅದರಂತೆ ಇದೀಗ ಆದಿತ್ಯ-ಎಲ್೧ ಉಪಗ್ರಹ ಈಗಾಗಲೇ ಶ್ರೀಹರಿಕೋಟಾದಲ್ಲಿನ ಉಡಾವಣಾ ಕೇಂದ್ರಕ್ಕೆ ತಲುಪಿದೆ. ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‌ಎಸ್‌ಸಿ) ತಯಾರುಗೊಂಡ ಉಪಗ್ರಹವು ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಶಾರ್ (ಸ್ಪೇಸ್‌ಪೋರ್ಟ್) ಗೆ ಆಗಮಿಸಿದೆ ಎಂದು ಇಸ್ರೋ ತಿಳಿಸಿದೆ. ಇಸ್ರೋದ ಆದಿತ್ಯ-ಎಲ್೧ ಬಾಹ್ಯಾಕಾಶ ನೌಕೆಯು ಸೂರ್ಯನ ಬಗೆಗಿನ ಕರೋನಲ್ ಮಾಸ್ ಎಜೆಕ್ಷನ್‌ಗಳ ಡೈನಾಮಿಕ್ಸ್ ಮತ್ತು ಮೂಲಗಳು ಸೇರಿದಂತೆ ಹಲವಾರು ಗುಣಲಕ್ಷಣಗಳನ್ನು ಅಧ್ಯಯನ ಮಾಡಲಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಕುತೂಹಲಕ್ಕೆ ಕಾರಣವಾಗಿದೆ.