ಆದಿತ್ಯ ಎಲ್1 ನಾಲ್ಕನೇ ಕಾರ್ಯಾಚರಣೆ ಯಶಸ್ವಿ

ಬೆಂಗಳೂರು, ಸೆ.೧೫- ಸೂರ್ಯನ ಬಗ್ಗೆ ಅಧ್ಯಯನ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕಳುಹಿಸಲಾದ ಇಸ್ರೋದ ಮಿಷನ್ ಆದಿತ್ಯ ಎಲ್೧ ಬಾಹ್ಯಾಕಾಶ ನೌಕೆಯು ಇದೀಗ ಇಂದು ಮುಂಜಾನೆ ನಾಲ್ಕನೇ ಭೂಬಂಧಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿದೆ. ಈ ಬಗ್ಗೆ ಇಸ್ರೋ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ನೌಕೆಯ ಮುಂದಿನ ಭೂಬಂಧಿತ ಕಾರ್ಯಾಚರಣೆಯು ಸೆಪ್ಟೆಂಬರ್ ೧೯ರಂದು ನಿಗದಿಪಡಿಸಲಾಗಿದೆ. ಇದನ್ನು ಭೂಮಿಯಿಂದ ಬೀಳ್ಕೊಡುಗೆ ಕಾರ್ಯಾಚರಣೆ ಎಂದು ಕೂಡ ಕರೆಯಲಾಗುತ್ತದೆ.
ಇಂದು ಮುಂಜಾನೆ ಸುಮಾರು ೨:೧೫ರ ವೇಳೆಗೆ ಭೂಬಂಧಿತ ಕಾರ್ಯಾಚರಣೆ ನಡೆಸಲಾಗಿತ್ತು. ನಾಲ್ಕನೇ ಭೂಮಿಯಾಧಾರಿತ ಕುಶಲತೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮಾರಿಷಸ್, ಬೆಂಗಳೂರು, ಎಸ್‌ಡಿಎಸ್‌ಸಿ-ಶಾರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೋದ ಗ್ರೌಂಡ್ ಸ್ಟೇಷನ್‌ಗಳು ಈ ಕಾರ್ಯಾಚರಣೆಯ ಸಮಯದಲ್ಲಿ ಉಪಗ್ರಹವನ್ನು ಟ್ರ್ಯಾಕ್ ಮಾಡಿತ್ತು. ಪ್ರಸ್ತುತ ದಹನೋತ್ತರ ಕಾರ್ಯಾಚರಣೆಗೆ ಪೂರಕವಾಗಿ ಫಿಜಿ ದ್ವೀಪದಲ್ಲಿ ಸಂಚಾರಿ ಟರ್ಮಿನಲ್ ಅನ್ನು ಇರಿಸಲಾಗಿದೆ ಎಂದು ಇಸ್ರೋ ತನ್ನ ಎಕ್ಸ್‌ನಲ್ಲಿ ತಿಳಿಸಿದೆ. ಸೆಪ್ಟೆಂಬರ್ ೩, ೫ ಮತ್ತು ೧೦ ರಂದು ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ಹಂತದ ಭೂಮಿಆಧಾರಿತ ಕುಶಲತೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತ್ತು. ಇನ್ನು ಬಾಹ್ಯಾಕಾಶ ನೌಕೆಯು ಭೂಮಿಯ ಸುತ್ತ ೧೬ ದಿನಗಳ ಪ್ರಯಾಣದ ಸಮಯದಲ್ಲಿ ಕುಶಲತೆಯನ್ನು ನಡೆಸುತ್ತದೆ. ಈ ಸಮಯದಲ್ಲಿ ಬಾಹ್ಯಾಕಾಶ ನೌಕೆಯು ಎಲ್೧ ಗೆ ತನ್ನ ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಒದಗಿಸುತ್ತದೆ. ಅಲ್ಲದೆ ಸದ್ಯ ನಾಲ್ಕನೇ ಕುಶಲತೆಯನ್ನು ಪೂರ್ಣಗೊಳಿಸುವ ಮೂಲಕ ಆದಿತ್ಯ ಎಲ್೧ ಮುಂದಿನ ಟ್ರಾನ್ಸ್-ಲಗ್ರಾಂಜಿಯನ್೧ ಅಳವಡಿಕೆಯ ಕುಶಲತೆಗೆ ಒಳಗಾಗಲಿದೆ. ಸೆಪ್ಟೆಂಬರ್ ೨ರಂದು ಶ್ರೀಹರಿಕೋಟಾದಿಂದ ಆದಿತ್ಯ ಎಲ್೧ ನೌಕೆಯನ್ನು ಉಡಾಯಿಸಲಾಗಿತ್ತು.