ಆದಿಕರ್ನಾಟಕ ವಿದ್ಯಾಸಂಸ್ಥೆ ಸೂಪರ್ ಸೀಡ್ ಗೆ ಒತ್ತಾಯ; ಪ್ರತಿಭಟನೆ


ದಾವಣಗೆರೆ.ನ.೨೧; ಆದಿಕರ್ನಾಟಕ ವಿದ್ಯಾಸಂಸ್ಥೆಯ ಈಗಿನ ಆಡಳಿತ ಮಂಡಳಿ ರದ್ದುಪಡಿಸಿ, ತಕ್ಷಣ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿ ಆದಿಕರ್ನಾಟಕ ವಿದ್ಯಾಸಂಸ್ಥೆ ಉಳಿವಿಗಾಗಿ ಹೋರಾಟ ಸಮಿತಿ ಸದಸ್ಯರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಆದಿಕರ್ನಾಟಕ ವಿದ್ಯಾಸಂಸ್ಥೆ  ಶಿಕ್ಷಣ ಪಡೆದಂತಹ ಮಕ್ಕಳು ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ರಾಜಕೀಯದಲ್ಲೂ ಕೂಡ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಸುಮಾರು 10 ವರ್ಷಗಳ ಈಚೆಗೆ ಬಂದಂತಹ ಕೆಲವರು ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಣ ಸಂಸ್ಥೆ ಕುಂಠಿತವಾಗುತ್ತಾ ಮಕ್ಕಳ ಸಂಖ್ಯೆಯು ಕೂಡ ಕಡಿಮೆಯಾಗುತ್ತಾ ಬಂದಿದ್ದು, ಈಗಿನ ಪರಿಸ್ಥಿತಿಯಲ್ಲಿ ಅಲ್ಲಿ ಕೇವಲ 40 ರಿಂದ 45 ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. 2.00 ಲಕ್ಷಕ್ಕೂ ಅಧಿಕ ಸಂಖ್ಯೆ ಹೊಂದಿರುವ ಈ ಸಮುದಾಯಲ್ಲಿ ಕನಿಷ್ಠ ಎರಡು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಅನುಕೂಲತೆಗಳು ಇದ್ದರೂ ಕೂಡ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ದುರಾದೃಷ್ಟಕರ. ಈಗಿನ ಆಡಳಿತ ಮಂಡಳಿ ಶಿಕ್ಷಣದ ಗುಣಮಟ್ಟ ನೋಡಿಕೊಳ್ಳುತ್ತಿಲ್ಲ, ಉದ್ಯೋಗಿಗಳಿಗೆ ಕಿರುಕುಳ, ಸರ್ಕಾರದ ಅನುದಾನದ ದುರುಪಯೋಗ, ಬಿಸಿಯೂಟದ ಹೆಸರಿನಲ್ಲಿ ರೇಷನ್‌ ದುರ್ಬಳಕೆ, ಮಹಿಳಾ ಸಿಬ್ಬಂದಿಗಳಿಗೆ ಅನುಚಿತ ವರ್ತನೆಗಳು ಈ ರೀತಿ ಅಕ್ರಮ ಕೂಟಗಳನ್ನು ರಚಿಸಿಕೊಂಡು ಸಮುದಾಯದ ಮಕ್ಕಳ ಭವಿಷ್ಯ ಹಾಳು ಮಾಡುತ್ತಾ ಸಂಸ್ಥೆಗೆ ಕೆಟ್ಟ ಹೆಸರು ತಂದಿದ್ದಾರೆ.  ಆಡಳಿತ ಮಂಡಳಿಯಲ್ಲಿ ಕೆಲವೇ ಕುಟುಂಬದ ರಕ್ತ ಸಂಬಂಧಿಗಳಿಂದ ಕೂಡಿದ ಆಡಳಿತ ಮಂಡಳಿ ಇರುವುದರಿಂದ ಈ ರೀತಿ ಅಕ್ರಮ ನಡೆಯಲು ಕಾರಣವಾಗಿದೆ. ಆದ್ದರಿಂದ ನ.13 ರ 2022 ರಂದು ನಡೆದಿರುವ ಅಕ್ರಮ ಚುನಾವಣೆಯ ಆಡಳಿತ ಮಂಡಳಿಯನ್ನು ತಕ್ಷಣ ರದ್ದುಪಡಿಸಿ, ಸಂಸ್ಥೆಯನ್ನು ಸೂಪರ್ ಸೀಡ್ ಮಾಡುವ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಿ, ಆದಿಕರ್ನಾಟಕ ಸಮುದಾಯದ ಆಸಕ್ತರಿಗೆ ಹೊಸದಾಗಿ ಸದಸ್ಯತ್ವವನ್ನು ಕೊಟ್ಟು ಕಾನೂನಾತ್ಮಕವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ನೀಲಗಿರಿಯಪ್ಪ,ಎಲ್ ಡಿ ಗೋಣೆಪ್ಪ,ಎಂ.ಹಾಲೇಶ್,ಆಲೂರು ನಿಂಗರಾಜ್,ಎಸ್ ಮಲ್ಲಿಕಾರ್ಜುನ, ಎಸ್ ದೋಣಿ ನಿಂಗಪ್ಪ,ಅಂಜಿನಪ್ಪ ಕಡತಿ,ಹನುಮಂತಪ್ಪ ಸೋಮಲಾಪುರ ಸೇರಿದಂತೆ ಅನೇಕರಿದ್ದರು.