ಆದಾಯ ಹೆಚ್ಚಿಸಲು ಲಾಭದಾಯಕ ರೇಷ್ಮೆ ಉದ್ಯಮ ರೈತರು ಅಳವಡಿಸಿಕೊಳ್ಳಿ: ಕಲಘಟಗಿ

ವಿಜಯಪುರ, ಮಾ.23-ರೇಷ್ಮೆ ಕೃಷಿ ಒಂದು ರೈತರಿಗೆ ಉತ್ತಮ ಉಪಕಸಬಾಗಿದ್ದು, ಜಿಲ್ಲೆಯ ರೈತರು ಇದನ್ನ ಅಳವಡಿಸಿಕೊಂಡಲ್ಲಿ ಹೆಚ್ಚಿನ ಆದಾಯ ಗಳಿಸಬಹುದೆಂದು ಕೃಷಿ ಮಹಾವಿದ್ಯಾಲಯ ಡೀನ್ ಡಾ.ಎಸ್.ಬಿ.ಕಲಘಟಗಿ ಹೇಳಿದರು.
ನಗರದ ಹೊರವಲಯದ ಹಿಟ್ನಳ್ಳಿ ಪಾರ್ಮನಲ್ಲಿ ಕೃಷಿ ಮಹಾವಿದ್ಯಾಲಯ, ಕೃಷಿ ಕೀಟಶಾಸ್ತ್ರ ವಿಭಾಗದ ವತಿಯಿಂದ ಎಸ್.ಸಿ.ಪಿ ಯೋಜನೆಯಡಿಯಲ್ಲಿ ವಿಜಯಪುರ ಜಿಲ್ಲೆಯ ರೇಷ್ಮೆ ಕೃಷಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ರೇಷ್ಮೆ ಕೃಷಿ ಒಂದು ಲಾಭದಾಯಕ ಉದ್ಯಮವಾಗಿದ್ದು, ರೈತರು ಇದಕ್ಕೆ ಸಂಬಂದಿಸಿದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ತಮ್ಮ ಇಡೀ ಕುಟುಂಬವನ್ನು ಇದರಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕೆಂದು ಕರೆ ನೀಡಿದರು.
ರೇಷ್ಮೆ ಉಪಕೃಷಿ ನಿರ್ದೇಶಕ ಎನ್. ಗಿರೀಶ ಮಾತನಾಡಿ, ರೇಷ್ಮೆ ಕೃಷಿಯನ್ನು ಮೊದಲು ಜಿಲ್ಲೆಯಲ್ಲಿ ಕಡಿಮೆ ರೈತರು ಬೆಳೆಯುತ್ತಿದ್ದು, ಇಲಾಖೆಗಳ ಅಧಿಕಾರಿಗಳ ಶ್ರಮದಿಂದಾಗಿ ಹೆಚ್ಚಿನ ರೈತರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ರೇಷ್ಮೆ ಗೂಡು ಸಾಕಾಣಿಗೆ, ರೇಷ್ಮೆಗೆ ಸಂಬಂದಿಸಿದ ವಿವಿಧ ಸಲಕರಣಿಗಳಿಗೆ ಸಹಾಯಧನ ಲಭ್ಯವಿದ್ದು ರೈತರು ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ ಮಾತನಾಡಿ, ರೈತರು ಮುಖ್ಯ ಕೃಷಿ ಜೊತೆಗೆ ರೇಷ್ಮೆ ಕೃಷಿ ಮಾಡಲು ವಿಪುಲ ಅವಕಾಶಗಳಿವೆ. ರೈತರಿಗೆ ಒಂದು ಬೆಳೆ ಕೈಕೊಟ್ಟರೆ ರೇಷ್ಮೆ ಕೃಷಿಯಿಂದ ಉತ್ತಮ ಲಾಭಗಳಿಸಬಹುದು, ಅದಕ್ಕಾಗಿ ರೈತರು ಸಾವಯವ ಕ್ರಮಗಳನ್ನಳವಡಿಸಿ ರೇಷ್ಮೆ ಕೃಷಿ ಮಾಡಿ ಅಧಿಕ ಲಾಭ ಪಡೆಯಲು ಹೇಳಿದರು.
ಯೋಜನೆಯ ಪ್ರಧಾನ ಸಂಯೋಜಕ ಡಾ. ಶ್ರೀಕಾಂತ ಚವ್ಹಾಣ ಇವರು ಎಸ್.ಸಿ.ಪಿ ಯೋಜನೆಯಡಿ ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕೀಟಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎ.ಪಿ. ಬಿರಾದಾರ ಹಾಗೂ ರೇಷ್ಮೆ ಕೃಷಿ ಪ್ರಗತಿಪರ ಬೆಳೆಗಾರ ಸಿದ್ದಣ್ಣ ಕಲ್ಲೂರ ಉಪನ್ಯಾಸ ನೀಡಿದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು, ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.