ಆದಾಯದ ಹೆಚ್ಚಿಸಿದ ಚೆಂಡು ಹೂವು

ಸಂಜೆವಾಣಿ ವಾರ್ತೆ
ಸಿರುಗುಪ್ಪ, ನ.3- ತಾಲೂಕಿನ ಗಜಿಗನಾಳು ಗ್ರಾಮದ ಹತ್ತಿರ ಪಂಪನಗೌಡ ತಮ್ಮ 5ಎಕರೆ ಜಮೀನಿನಲ್ಲಿ 70ಸಾವಿರ ಚೆಂಡು ಹೂ ಬೆಳೆದು ಅಧಿಕಾ ಲಾಭಗಳಿಸುವ ಮೂಲಕ ಮಾದರಿ ರೈತ ಎನ್ನಿಸಿಕೊಂಡಿದ್ದಾರೆ.
ಭತ್ತದ ನಾಡಿನಲ್ಲಿ ಇಸ್ರೇಲ್ ಪದ್ದತಿಯನ್ನು ಅಳವಡಿಸಿಕೊಂಡು ಚೆಂಡು ಹೂವಿನ ಕೃಷಿ ಮಾಡುತ್ತಿರುವುದು ವಿಶೇಷವಾಗಿದೆ. ಅತಿಹೆಚ್ಚಿನ ನೀರು ಬಳಸದೇ ಜಮೀನಿನ ಪಕ್ಕದಲ್ಲಿ ಮಳೆನೀರಿನ ಕೃಷಿಹೊಂಡ ನಿರ್ಮಿಸಿಕೊಂಡು ಅದಕ್ಕೆ ಇಸ್ರೇಲ್ ಪದ್ದತಿಯ ಹನಿ ನೀರಾವರಿ ಅಳವಡಿಸಿಕೊಂಡು ಹಬ್ಬದ ಆಚರಣೆಗೆ ಅನುಸಾರವಾಗಿ ಬೇಡಿಕೆ ಹೆಚ್ಚಾಗುವ ಹೂವಿನ ಬೆಳೆಯನ್ನು ಬೆಳೆದು ಅಧಿಕಾ ಲಾಭವನ್ನು ಗಳಿಸಿದ್ದಾರೆ.
ದಸರಾ ಮತ್ತು ದೀಪಾವಳಿ, ಗೌರಿ ಹಬ್ಬಗಳಲ್ಲಿ ಚೆಂಡು ಹೂವಿನ ಬೇಡಿಕೆ ಇರುವುದರಿಂದ ಚೆಂಡು ಹೂ ಬೆಳೆದು ಉತ್ತಮ ಸಂಪಾದನೆ ಮಾಡಬಹುದು ಎನ್ನುವ ಉದ್ದೇಶದಿಂದಾಗಿ 5ಎಕರೆ ಜಮೀನಿನಲ್ಲಿ ಇಸ್ಟ್‍ವೆಸ್ಟ್ ಕಂಪನಿಯ ಆರಂಜ್ ಕಲರ್‍ನ ಅಶೋಕ ತಳಿ ಮತ್ತು ಇಂಡೋಸ್ ಕಂಪನಿಯ ಹಳದಿ ಕಲರ್‍ನಶ್ರೀತಳಿಯ ಚೆಂಡು ಹೂವಿನ ಸಸಿಯನ್ನು ನಾಟಿ ಮಾಡಿದ್ದು, 5ಎಕರೆಯಲ್ಲಿ 20ರಿಂದ 25 ಟನ್ ಚೆಂಡು ಹೂವು ಇಳುವರಿ ಬರುವ ನಿರೀಕ್ಷೆ ಇದೆ.
  ನಾಟಿ ಮಾಡಿ 30 ದಿನಗಳಾದ ನಂತರ ಸಸಿಯ ಮೊದಲನೇಯ ಮೊಗ್ಗು ಕಟ್ಟಾವು ಮಾಡಿದರೆ ಗಿಡವು ಹೆಚ್ಚಿನ ರೀತಿಯಲ್ಲಿ ಸಸಿ ಬೆಳೆಯುತ್ತದೆ ಇದರಿಂದ ಇಳುವರಿ ಹೆಚ್ಚು ಪಡೆಯಬಹುದು. ಸೆಪ್ಟಂಬರ್ ತಿಂಗಳ ಕೊನೆಯ ವಾರದಿಂದ ಚೆಂಡು ಹೂವು ಬಿಡಲು ಪ್ರಾರಂಭವಾಗಿ ನವಂಬರ್‍ವರೆಗೆ ಅತ್ಯಧಿಕ ಹೂಗಳು ದೊರೆಯುತ್ತವೆ, ಪ್ರತಿ ಕ್ವಿಂಟಾಲ್‍ಗೆ  ಮಾರುಕಟ್ಟೆಯಲ್ಲಿ 6ರಿಂದ 7ಸಾವಿರವರೆಗೂ ಲಾಭ ದೊರೆಯುತ್ತದೆ.
 ಇರುವ ಜಮೀನಿನಲ್ಲಿ ಸಮಯಕ್ಕೆ ಅನುಸಾರವಾಗಿ ಕಡಿಮೆ ಖರ್ಚನಲ್ಲಿ ಅಧಿಕಾ ಇಳುವರಿಯೊಂದಿಗೆ ಹೆಚ್ಚಿನ ಲಾಭವನ್ನು ನೀಡುವ ಬೆಳೆಗಳನ್ನು ಬೆಳೆಯುವ ಪದ್ದತಿಯನ್ನು ನಮ್ಮ ರೈತರು ಮೈಗೂಡಿಸಿಕೊಳ್ಳಬೇಕು, ಚೆಂಡು ಹೂವಿನ ಬೆಳೆಯನ್ನು ಮಾಡಿದ್ದು, ಭತ್ತದ ಕೃಷಿಗೆ ಹೋಲಿಸಿದರೆ ಚೆಂಡು ಹೂವಿನ ಕೃಷಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡಯಬಹುದಾಗಿದೆ. ಜಮೀನಿನಲ್ಲಿಯೇ ನಗರದ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ಆಂದ್ರಪ್ರದೇಶದ ಆಧೋನಿಯ ಹೂ ವ್ಯಾಪಾರಿಗಳಿಂದ ಖರೀದಿಯಾಗುತ್ತದೆ, ನಿರೀಕ್ಷೆ ಮೀರಿ ಲಾಭ ಸಿಗುವಸಾಧ್ಯತೆ ಹೆಚ್ಚಿದೆ.
ಪಂಪನಗೌಡ, ಪ್ರಗತಿಪರ ರೈತ, ರಾರಾವಿ ಗ್ರಾಮ, ಸಿರುಗುಪ್ಪ
ದಸರ ಮತ್ತು ದೀಪಾವಳಿ, ಗೌರಿ ಹಬ್ಬಕ್ಕೆ ಹೂವಿನ ಬೇಡಿಕೆ ಹೆಚ್ಚಾಗುವುದರಿಂದ ರೈತರು ಅತಿ ಕಡಿಮೆ ಸಮಯದಲ್ಲಿ ಚೆಂಡು ಹೂವಿನ ಕೃಷಿಯನ್ನು ಮಾಡಿ ಆದಾಯ ದ್ವಿಗುಣಗೊಳಿಸಬಹುದು, ಬೆಳೆಯೊಂದಿಗೆ ಬೆಳೆಯ ಸ್ನೇಹಿತನಾಗಿ ಈ ಚೆಂಡು ಹೂವಿನ ಕೃಷಿಯನ್ನು ಅಳವಡಿಸಿಕೊಳ್ಳಬೇಕು.
ವಿಶ್ವನಾಥ, ಹಿರಿಯ ಸಹಾಯಕ ನಿದೇರ್ಶಕ, ತೋಟಗಾರಿಕೆ ಇಲಾಖೆ, ಸಿರುಗುಪ್ಪ