ಆದಾಯತೆರಿಗೆ ಪಾವತಿಗೆ ಇಂದೇ ಕಡೆದಿನ

ನವದೆಹಲಿ,ಜು,೩೧- ೨೦೨೨-೨೩ರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇಂದು ಕಡೆಯ ದಿನವಾಗಿದ್ದು ವಿಸ್ತರಣೆ ಮಾಡುವುದು ತೀರಾ ವಿರಳ ಎನ್ನಲಾಗಿದೆ.ಐಟಿಆರ್ ಅನ್ನು ಇನ್ನೂ ಸಲ್ಲಿಸದ ಇರುವ ಮಂದಿ ಇಂದೇ ಸಲ್ಲಿಸಬೇಕು ಇಂದು ಬಿಟ್ಟರೆ ಈ ವರ್ಷದ ಡಿಸೆಂಬರ್ ೩೧ ರತನಕ ರಿಟನ್ ಸಲ್ಲಿಸಬಹುದು. ಆದರೆ ನಾಳೆಯಿಂದ ರಿಟರ್ನ್ ಸಲ್ಲಿಸುವ ಮಂದಿಗೆ ದಂಡ ವಿಧಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.
ವಾರ್ಷಿಕ ಆದಾಯ ೫ ಲಕ್ಷದವರೆಗಿನ ತೆರಿಗೆದಾರರಿಗೆ ವಿಳಂಬ ಶುಲ್ಕ ೧,೦೦೦ ರೂಪಾಯಿ, ವಾರ್ಷಿಕ ಆದಾಯ ೫ ಲಕ್ಷಕ್ಕಿಂತ ಹೆಚ್ಚಿದ್ದರೆ ತಡವಾಗಿ ರಿಟರ್ನ್ ಸಲ್ಲಿಸುವ ಮಂದಿಗೆ ೫,೦೦೦ ದಂಡ ವಿಧಿಸಲಾಗುತ್ತಿದೆ.
೫ ಕೋಟಿ ಮಂದಿ ರಿಟರ್ನ್ ಸಲ್ಲಿಕೆ:
ಈ ವರ್ಷ ಇಲ್ಲಿಯ ತನಕ ೫ ಕೋಟಿಗೂ ಹೆಚ್ಚು ಆದಾಯ ತೆರಿಗೆದಾರರು ತಮ್ಮ ರಿಟರ್ನ್‌ಗಳನ್ನು ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ಆದಾಯ ಇಲಾಖೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದ್ದು ತೆರಿಗೆದಾರರು, ಬಹುಪಾಲು ವ್ಯಕ್ತಿಗಳು ಮತ್ತು ಸಂಬಳ ಪಡೆಯುವ ವರ್ಗಕ್ಕೆ ಜುಲೈ ೩೧ ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಂತಿಮ ದಿನವಾಗಿದೆ.
ಒಟ್ಟು ಆದಾಯದ ಮೂಲ ವಿನಾಯಿತಿ ಮಿತಿ ಮೀರದಿದ್ದರೆ, ತಡವಾದ ರಿಟರ್ನ್ ಸಲ್ಲಿಸಿದರೂ ದಂಡ ಪಾವತಿಸಬೇಕಾಗಿಲ್ಲ. ಹಳೆಯ ಆದಾಯ ತೆರಿಗೆ ಪದ್ಧತಿಯ ಅಡಿಯಲ್ಲಿ, ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ತೆರಿಗೆದಾರರಿಗೆ ಮೂಲ ತೆರಿಗೆ ವಿನಾಯಿತಿ ಮಿತಿಯು ೨.೫ ಲಕ್ಷವಾಗಿದೆ. ೬೦ ರಿಂದ ೮೦ ವರ್ಷ ವಯಸ್ಸಿನವರಿಗೆ ಮೂಲ ವಿನಾಯಿತಿ ಮಿತಿ ೩ ಲಕ್ಷಕ್ಕೆ ನಿಗದಿಪಡಿಸಲಾಗಿದೆ. ೮೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ, ವಿನಾಯಿತಿ ಮಿತಿಯು ೫ ಲಕ್ಷಕ್ಕೆ ಮಿತಿಗೊಳಿಸಲಾಗಿದೆ.