ಆದರ್ಶ ಶಿಕ್ಷಕ ದಂಪತಿ ಪುರಸ್ಕಾರಕ್ಕೆ ಆಯ್ಕೆ


ಧಾರವಾಡ ಮಾ.29:ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ನೀಡಲಾಗುವ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ದಿ.ಶಿವಗಂಗಾ ಶ್ರೀ ವೀರಪ್ಪಾ ರಾಮಾಪೂರ ದತ್ತಿ “ಆದರ್ಶ ಶಿಕ್ಷಕ ದಂಪತಿ” 2020ನೇ ಸಾಲಿನ ಪುರಸ್ಕಾರಕ್ಕೆ ಬೊಮ್ಮಕ್ಕನವರ ಶಿಕ್ಷಕ ದಂಪತಿಗಳನ್ನು ಆಯ್ಕೆ ಮಾಡಲಾಗಿದೆ.
ಉಮೇಶ ಬೊಮ್ಮಕ್ಕನವರ 1996ರಿಂದ ಕುದರೇಮುಖದ ಕೇಂದ್ರೀಯ ವಿದ್ಯಾಲಯದಿಂದ ಸೇವೆ ಆರಂಭಿಸಿ, ಬೇಲೇರಿ, ಹೂವಿನಶಿಗ್ಲಿಯ ಪ್ರೌಢಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ನಂತರ ಧಾರವಾಡ ಡೈಟಿನಲ್ಲಿ ಉಪನ್ಯಾಸಕರಾಗಿ, ಪ್ರಸ್ತುತ ಧಾರವಾಡ ಗ್ರಾಮೀಣದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಲವಾರು ಶೈಕ್ಷಣಿಕ ವಿನೂತನ ಆವಿಷ್ಕಾರಗಳನ್ನು ಕೈಗೊಂಡಿದ್ದಾರೆ. ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯಾಗಿದ್ದಾರೆ. ಪುಸ್ತಕ ಜೋಳಿಗೆ ಎಂಬ ವಿಶಿಷ್ಠ ಯೋಜನೆಯ ಮೂಲಕ ಪುಸ್ತಕ ಸಂಗ್ರಹಿಸಿ ಮಕ್ಕಳ ಗ್ರಂಥಾಲಯ ಬಲಿಷ್ಠಗೊಳಿಸುವ, ಆ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಅನನ್ಯ ಸೇವೆ ಮಾಡುತ್ತಿದ್ದಾರೆ. ಅವರ ಪತ್ನಿ ಸುಜಾತಾ ಬಾಸೂರ ಕೆ.ಎನ್.ಕೆ ಪ್ರೌಢಶಾಲೆಯಲ್ಲಿ 1999 ರಿಂದ ವಿಜ್ಞಾನ ಶಿಕ್ಷಕಿಯಾಗಿ ಈಗ ಮುಖ್ಯೋಪಾಧ್ಯಾಯರಾಗಿ ಎಲೆಮರೆಯ ಕಾಯಿಯಂತೆ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗಳಿಬ್ಬರೂ ಶಿಕ್ಷಕರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಗಣನೀಯ ಸೇವೆ ಸಲ್ಲಿಸಿದ್ದಾರೆ. ದಂಪತಿಗಳ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರತಿ ವರ್ಷ ಶಿಕ್ಷಕ ದಿನೋತ್ಸವದಂದು ನಡೆಯಬೇಕಿದ್ದ ಈ ಕಾರ್ಯಕ್ರಮ ಈ ವರ್ಷ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಈ ಪುರಸ್ಕಾರವನ್ನು ಎಪ್ರೀಲ್ 12, ಸೋಮವಾರ ಸಂಜೆ 6 ಗಂಟೆಗೆ ವಿದ್ಯಾವರ್ಧಕ ಸಂಘದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣ್ಯರಿಂದ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಏಪ್ರಿಲ್ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಚೈತ್ರಾ ಮೋಹನ ನಾಗಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.