ಆದರ್ಶ ಬದುಕು ರೂಪಿಸಿಕೊಂಡಿದ್ದ ಎಂ.ಜಿ.ಗಂಗನಪಳ್ಳಿ

ಬೀದರ, ಡಿ.10 : ದಿ.ಎಂ.ಜಿ. ಗಂಗನಪಳ್ಳಿ ಯವರು ತಮ್ಮ ಇಡೀ ಜೀವನವನ್ನು ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದರು. ಅವರದ್ದು ಅಪರೂಪದ ಜೀವನ, ಸಾರ್ಥಕ ಬದುಕು, ಅವರ ಜೀವನದ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ವಿದೇಶದ ನೆಲದಲ್ಲಿ ಮೂಡಿದ ಸಾನೆಟ್ ಕಾವ್ಯ ಪ್ರಕಾರವನ್ನು ಬೀದರ ಜಿಲ್ಲೆಗೆ ಪರಿಚಯಿಸಿದವರಲ್ಲಿ ಗಂಗನಪಳ್ಳಿಯವರು ಅಗ್ರಗಣ್ಯರು. ಅವರು ಇದುವರೆಗೂ 14 ಕವನಸಂಕಲನ, 3 ಗದ್ಯ, 12 ಜೀವನಚರಿತ್ರೆ, 2 ಅನುವಾದ, 2 ಕ್ಷೇತ್ರದರ್ಶನ, 3 ಖಂಡ ಕಾವ್ಯಗಳು, 5 ವಿಮರ್ಶೆ, 3 ಚುಟುಕು, 2 ವಚನ ಸಾಹಿತ್ಯ, 3 ಸಂಪಾದನೆ, 3 ಸುಪ್ರಭಾತ ಸೇರಿದಂತೆ ಒಟ್ಟು 53 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ಸಾಹಿತಿ ಮತ್ತು ವಿಮರ್ಶಕ ಡಾ.ಬಸವರಾಜ ಬಲ್ಲೂರು ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅತಿವಾಳೆ ಸಾಂಸ್ಕøತಿಕ ಪ್ರತಿಷ್ಠಾನ ಜಂಟಿಯಾಗಿ ನಗರದ ಕೃಷ್ಣಾ ರಿಜೇನ್ಸಿಯಲ್ಲಿ ಆಯೋಜಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿ, ಸಾನೆಟ್ ಕವಿ ಎಂದೇ ಪ್ರಖ್ಯಾತರಾಗಿದ್ದ ಎಂ.ಜಿ. ಗಂಗನಪಳ್ಳಿಯವರ ‘ಭಾವ ನಮನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗಂಗನಪಳ್ಳಿಯವರು ಅನೇಕ ಉತ್ಕೃಷ್ಟ ಕೃತಿಗಳನ್ನು ನೀಡಿದ್ದಾರೆ. ಅವರ ಕಾವ್ಯ ವ್ಯಾಕರಣ ಬದ್ಧವೂ ಮತ್ತು ಗಟ್ಟಿ ಬರಹವೂ ಆಗಿದ್ದು, ಅವರ ಮೇಲೆ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಶಾರದಾ ಮಾತೆಯ ಗಾಢ ಪ್ರಭಾವ ಇತ್ತು, ಹೀಗಾಗಿ ಅವರು ಆದರ್ಶ ಜೀವನ ನಡೆಸಿದ್ದರೆಂದು ಹೇಳಿದರು. ಜಿಲ್ಲೆಯ ಅನೇಕ ಕವಿ, ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು, ಅವರು ಬದುಕಿರುವಾಗಲೇ ಅವರ ಕುರಿತು ಸಂಜೀವಕುಮಾರ ಅತಿವಾಳೆಯವರು ‘ಭಾವಗಂಗೆ’ ಎನ್ನುವ ಅಭಿನಂದನ ಗ್ರಂಥ ಅರ್ಪಿಸಿರುವುದು ಸ್ತುತ್ಯಾರ್ಹ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಪೆÇ್ರ.ಸಿದ್ರಾಮಪ್ಪ ಮಾಸಿಮಾಡೆ ಅವರು ಮಾತನಾಡಿ, ಗಂಗನಪಳ್ಳಿಯವರದ್ದು ವಿಶೇಷ ವ್ಯಕ್ತಿತ್ವ, ಅವರು ಸಾಹಿತ್ಯದ ಭಂಡಾರವಾಗಿದ್ದರು, ಸಾಹಿತ್ಯದ ಸಾರ್ಥಕ ಬದುಕನ್ನು ಬಾಳಿದ ಅವರ ಆಚಾರ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಬೇಕಾಗಿದೆ ಎಂದರು.
ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಅವರು ಮಾತನಾಡಿ, ಗಂಗನಪಳ್ಳಿಯವರು ವಿಶಾಲ ಹೃದಯಿಗಳಾಗಿದ್ದರು, ಜ್ಞಾನವಂತರಾಗಿದ್ದರು, ಅವರ ಸಾಹಿತ್ಯಕ್ಕೆ ಪ್ರೇರಣೆ ಅವರ ತಂದೆ, ಕುವೆಂಪು ಅವರ ಭೇಟಿ ಮತ್ತು ನಿಸರ್ಗದ ರಮ್ಯತೆ ಆಗಿತ್ತು. ಅವರ ಮಾತುಗಳು ತಾರ್ಕಿಕವಾಗಿರುತ್ತಿದ್ದವು, ಆಡಂಬರದ ಜೀವನ ಶೈಲಿಗೆ ಮಾರುಹೋಗದೇ ಸರಳತೆ ಮತ್ತು ಮಿತ ಆಹಾರ ಶೈಲಿಯನ್ನು ಅಳವಡಿಸಿಕೊಂಡಿದ್ದರೆಂದು ಹೇಳಿದರು.
ಮುಖಂಡರಾದ ಪಂಡಿತರಾವ ಚಿದ್ರಿ ಮಾತನಾಡಿ, ಗಂಗನಪಳ್ಳಿಯವರು ಸಾಹಿತಿಗಳಾಗಿದ್ದು, ಆದರ್ಶ ಜೀವನ ನಡೆಸಿದ್ದರೆಂದು ಹೇಳಿದರು. ಪತ್ರಕರ್ತ ಮಾಳಪ್ಪ ಅಡಸಾರೆ ಮಾತನಾಡಿ, ಎಂ.ಜಿ.ಗಂಗನಪಳ್ಳಿಯವರು ತಮ್ಮ ಸಾಹಿತ್ಯ ಮೂಲಕ ಅನೇಕರಿಗೆ ಮಾದರಿಯಾಗಿದ್ದರು. ಅವರ ಜೀವನವೇ ಒಂದು ಋಷಿ ಜೀವನವಾಗಿತ್ತೆಂದರು. ಹಿರಿಯ ಸಾಹಿತಿ ಶ್ರೀಮತಿ ಭಾರತಿ ವಸ್ತ್ರದ ಮಾತನಾಡಿ, ತಾವಿಬ್ಬರೂ ಒಂದೇ ಶಾಲೆಯಲ್ಲಿ ಕೆಲಸ ಮಾಡಿದ್ದು, ಅವರೊಬ್ಬ ಉತ್ತಮ ಶಿಕ್ಷಕರಾಗಿದ್ದರೆಂದು ಸ್ಮರಿಸಿದರು. ಶ್ರೀಮತಿ ರೇಣುಕಾ ಎನ್.ಬಿ. ಅವರು ಗಂಗನಪಳ್ಳಿಯವರು ರಚಿಸಿರುವ ಕವಿತೆಗೆ ಸ್ವರಸಂಯೋಜನೆ ಮಾಡಿ ಹಾಡಿದರು. ಇದೇ ಸಂದರ್ಭದಲ್ಲಿ ಡಾ.ಶ್ರೇಯಾ ಮಹೀಂದ್ರಕರ್ ಅವರು ಗಂಗನಪಳ್ಳಿಯವರನ್ನು ಕುರಿತು ರಚಿಸಿರುವ ‘ಬೀದರಿನ ಕೊಡುಗೆ’ ಹಾಗೂ ಮಾಣಿಕ ನೇಳಗೆ ರಚಿಸಿರುವ ‘ಮಾಗಿದ ಕಾಯಿ’ ಎನ್ನುವ ಕವನಗಳನ್ನು ವಾಚಿಸಿದರು. ಎಂ.ಜಿ.ಗಂಗನಪಳ್ಳಿ ಅವರ ಸಹೋದರ ರಾಮರಾವ ಗಂಗನಪಳ್ಳಿ ಅವರು ಮಾತನಾಡಿದರು. ವೇದಿಕೆಯ ಮೇಲೆ ಎಂ.ಎಸ್.ಕಟಗಿ ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ನಮ್ಮಂತಹ ಅನೇಕ ಯುವಕರಿಗೆ ಗಂಗನಪಳ್ಳಿಯವರ ಬದುಕು ಮಾರ್ಗದರ್ಶಕವಾಗಿದೆ, ಜಿಲ್ಲೆಯ ಹಿರಿಯ ಸಾಹಿತಿಯಾಗಿದ್ದ ಗಂಗನಪಳ್ಳಿಯವರನ್ನು ಕಳೆದುಕೊಂಡು ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಭಿಮಾನಿಗಳಿಗೆ, ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ನಿಧನರಾದ ಎಂ.ಜಿ.ಗಂಗನಪಳ್ಳಿ ಮತ್ತು ಚಿತ್ರ ನಟಿ ಲೀಲಾವತಿ ಅವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವಕುಮಾರ ಅತಿವಾಳೆ ಅವರು ಮುಂದಿನ ದಿನಗಳಲ್ಲಿ ಗಂಗನಪಳ್ಳಿಯವರ ಸಾಹಿತ್ಯದ ಕುರಿತಾದ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗುವುದು ಎಂದರು. ಆರಂಭದಲ್ಲಿ ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಗೌ.ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ ವಂದಿಸಿದರು.
ಎಂ.ಜಿ.ಗಂಗನಪಳ್ಳಿಯವರ ಸಾಹಿತ್ಯಾಭಿಮಾನಿಗಳು, ಕುಟುಂಬ ಸದಸ್ಯರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.