ಆತ್ಮ ಯೋಜನೆ ಪ್ರಯೋಜನ ಪಡೆದುಕೊಳ್ಳಿ: ಕೆ.ಪಿ.ಸುಚಿತ್ರ

ಕೆ.ಆರ್.ಪೇಟೆ.ಜು.31:- ರೈತರು ಆಧುನಿಕ ರೀತಿಯ ಬೇಸಾಯದ ಪದ್ಧತಿಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಸಮಯ, ಮಾನವನ ಹಣ ಶ್ರಮ ಮುಂತಾದುವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ ಕೆ.ಪಿ.ಸುಚಿತ್ರ ಕರೆ ನೀಡಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಂಬಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಯಂತ್ರದ ಮೂಲಕ ಭತ್ತದ ನಾಟಿ ಮಾಡುವ ಕಾರ್ಯದ ಪ್ರಾತ್ಯಕ್ಷತೆ ನೀಡಿ ಮಾತನಾಡಿದರು.
ಹಳೆಯ ಸಾಂಪ್ರದಾಯಿಕ ಕೃಷಿ ಪದ್ದತಿಗಳಿಗೆ ರೈತರು ಜೋತುಬೀಳದೇ ಹೊಸಹೊಸ ವಿಧಾನಗಳನ್ನು ತಮ್ಮ ವ್ಯವಸಾಯದ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳು ಎಲ್ಲರಿಗೂ ತಿಳಿದಿದೆ. ಎಲ್ಲೆಲ್ಲಿ ನೋಡಿದರೂ ಕೃಷಿಕರ ಸಮಸ್ಯೆ, ದನಗಳ ಉಳುಮೆ, ಕಟಾವು, ಸಾಗಾಣಿಕೆ ಮುಂತಾದ ಸಮಸ್ಯೆಗಳಿಂದ ರೈತರು ಹೈರಾಣಾಗಿದ್ದಾರೆ. ಇದರಿಂದಾಗಿ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸಮಯ, ಹಣ, ಶ್ರಮ ಮುಂತಾದುವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಎಂದು ತಿಳಿಸಿದರು. ಇದೇ ವೇಳೆ ಭತ್ತದ ನಾಟಿಯ ವೇಳೆ ಬೀಜೋಪಚಾರದ ಬಗ್ಗೆ ನೆರೆದಿದ್ದ ರೈತರುಗಳಿಗೆ ಸಾಕಷ್ಟು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೇಸಾಯ ತಜ್ಞೆ ರೇಖಾ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕಿ ಶೃತಿ, ಶಾಲಿನಿ, ದರ್ಶಿನಿ, ಅಕ್ಷತಾ, ವಿದ್ಯಾರಾಣಿ, ಅವಿನಾಶ್, ಅಕ್ಕಿಹೆಬ್ಬಾಳು ಹೋಬಳಿ ಕೃಷಿ ಅಧಿಕಾರಿ ಆನಂದ್, ಕೃಷಿ ಅಧಿಕಾರಿ ಮನೋಹರ್, ಸೇವಾ ಪ್ರತಿನಿಧಿ ಹೀನಾ ಜೈರಾಮ್ ಸೇರಿದಂತೆ ಹಲವರು ಹಾಜರಿದ್ದರು.