ಆತ್ಮ ಯೋಜನೆಗಳ ಲಾಭ ರೈತರಿಗೆ ತಲುಪಿಸಿ : ಗದ್ದಿಗೌಡರ

ಬಾಗಲಕೋಟೆ,ಜೂ.9 : ಕೇಂದ್ರ ಸರಕಾರದ ಮಹತ್ವದ ಆತ್ಮಾ ಯೋಜನೆಯ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಯೋಜನಾ ಅನುಷ್ಟಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆತ್ಮಾ ಯೋಜನೆಗಳ ಮುಖಾಂತರ ಇಲಾಖೆಗಳು ಒಗ್ಗೂಡಿ ರೈತರನ್ನು ಭೇಟಿ ಮಾಡಿ ಪ್ರೋತ್ಸಾಹ ಹಾಗೂ ತಿಳುವಳಿಕೆ ನೀಡುವ ಕೆಲಸವಾಗಬೇಕು. ಕೃಷಿ ಒಂದನ್ನೇ ಅವಲಂಬಿಸದೆ ಕೃಷಿಯೇತರ ಚಟುವಟಿಕೆ ಕೈಗೊಳ್ಳುವುದರಿಂದ ಆಗುವ ಲಾಬದ ಬಗ್ಗೆ ಇಲಾಖೆಯ ಯೋಜನೆಗಳೊಂದಿಗೆ ಸಮನ್ವಯಗೊಳಿಸಿ ಹೆಚ್ಚು ಆದಾಯ ಬರುವಂತೆ ರೈತನಿಗೆ ಮಾಹಿತಿ ನೀಡಲು ತಿಳಿಸಿದರು.
ರೈತರಿಗೆ ಸಮರ್ಪಕವಾಗಿ ಒಳ್ಳೆಯ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಾಗಬೇಕು. ಕೇಂದ್ರ ಸರ್ಕಾರವು ಸಮರ್ಪಪಕ ರಸಗೊಬ್ಬರ ವಿತರಣೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅಧಿಕಾರಿಗಳು ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸಾವಯವಕ್ಕೆ ಹೆಚ್ಚು ಒತ್ತು ಕೊಟ್ಟು ರೈತರಲ್ಲಿ ಅರಿವು ಮೂಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ವಿನ್ಯಾಸ/ಅವಕಾಶಗಳನ್ನು ಅಳವಡಿಸಿಕೊಂಡು ಜಿಲ್ಲಾ ಕ್ರಿಯಾ ಯೋಜನೆ ಮಾಡಿ ಹೆಚ್ಚು ಅನುದಾನ ವಿನಿಯೋಗಿಸಿಕೊಳ್ಳಲು ತಿಳಿಸಿದರು. ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಕ್ಷೇತ್ರ ವಿಸ್ತರಣೆಯಲ್ಲಿ ಹೆಚ್ಚು ಸಾಧನೆ ಮಾಡಲು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಕೇಂದ್ರ ಸರ್ಕಾರವು ಜಿಲ್ಲೆಗೆ ಪಿಓಎಸ್ ಯಂತ್ರದಲ್ಲಿ ಇರುವ ರಸಗೊಬ್ಬರದ ಪ್ರಮಾಣವನ್ನು ಆಧರಿಸಿ ಬೇಡಿಕೆಗನುಗುಣವಾಗಿ ಹಂಚಿಕೆ ಮಾಡುತ್ತಿದ್ದು, ಎಲ್ಲ ವಿತರಕರು ದಾಸ್ತಾನು ಹಾಗೂ ಪಿಓಎಸ್ ಯಂತ್ರದ ದಾಸ್ತಾನು ಹೋಲಿಕೆಯಲ್ಲಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಬೆಳೆ ವಿಮೆ ಯೋಜನೆಯಡಿ ಪರಿಹಾರ ಬಾಕಿ ಇರುವ ರೈತರ ಪಟ್ಟಿಯನ್ನು ತಾಲೂಕಾವಾರು ತಹಶೀಲ್ದಾರರಿಗೆ ನೀಡಿ, ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪಾವತಿಗೆ ಬಾಕಿಗೆ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಆಧಾರ ಲಿಂಕ್‍ಗಾಗಿ ಕ್ರಮವಹಿಸಲು ಸೂಚಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಮಾತನಾಡಿ ಉದ್ಯೂಗ ಖಾತ್ರಿ ಯೋಜನೆಯಡಿ ಹಾಗೂ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ರೈತರಿಗೆ ತಲುಪಿಸಲು ಸೂಚಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 5,17,350 ಹೆಕ್ಟೆರ್ ಕ್ಷೇತ್ರ ಸಾಗುವಳಿಗೆ ಯೋಗ್ಯವಾಗಿದ್ದು, ಮುಂಗಾರು ಹಂಗಾಮಿನಲ್ಲಿ 2,65,000 ಹೆಕ್ಟೇರ್ ವಿವಿಧ ಬೆಳೆಗಳನ್ನು ಬೆಳೆಯುವ ಗುರಿಯನ್ನು ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ಈ ವರೆಗೆ ಒಟ್ಟು 102.9 ಮಿ.ಮೀ ಸಾಮಾನ್ಯ ಮಳೆ ಇದ್ದು, ವಾಸ್ತವವಾಗಿ 123 ಮಿ.ಮೀ ಮಳೆಯಾಗಿರುತ್ತದೆ. ಒಟ್ಟು 67,653 ಹೆಕ್ಟೆರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಕಳದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.