ಆತ್ಮ ಬಲ ಸಂವರ್ಧನೆಗೆ ಭಗವಂತನ ಪೂಜೆ ಅವಶ್ಯಕ : ಶ್ರೀ ರಂಭಾಪುರಿ ಜಗದ್ಗುರುಗಳು

ಕೊಲ್ಲಿಪಾಕಿ (ತೆಲಂಗಾಣ ರಾಜ್ಯ):ಜ. 6: ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಿವನ ಆರಾಧನೆ ನಡೆಯುತ್ತಲೇ ಬಂದಿದೆ. ಸುಖ ಶಾಂತಿ ಮತ್ತು ಆತ್ಮಬಲ ಸಂವರ್ಧನೆಗೆ ಭಗವಂತನ ನೆನಹು ಪೂಜೆ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಜರುಗಿದ ವಿಶೇಷ ಪೂಜಾ-ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನ ಬುದ್ಧಿ ಶಕ್ತಿ ಬೆಳೆಯಿತೇ ವಿನ: ಭಾವನೆಗಳು ಬೆಳೆಯಲಿಲ್ಲ. ನಾನು ನನ್ನದು ಎಂಬ ಸ್ವಾರ್ಥ ಮನೋಭಾವ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಕಾರಣ ಎಲ್ಲ ರಂಗಗಳಲ್ಲಿ ಅಶಾಂತಿ ಅತೃಪ್ತಿ ತಾಂಡವಗೊಳ್ಳುತ್ತಿವೆ. ದೇವರಲ್ಲಿ ಶೃದ್ಧೆ, ಗುರು ಹಿರಿಯರಲ್ಲಿ ವಿಧೇಯತೆ, ಮಾಡುವ ಕೆಲಸದಲ್ಲಿ ಆಸಕ್ತಿ ಬೆಳೆಸುವ ಅವಶ್ಯಕತೆಯಿದೆ. ಅತಿಯಾದ ವೈಚಾರಿಕತೆ-ನಾಸ್ತಿಕ ಮನೋಪ್ರವೃತ್ತಿಯಿಂದ ಮನುಷ್ಯ ಜೀವನದಲ್ಲಿ ತೃಪ್ತಿ ಸಮಾಧಾನ ಕಾಣುತ್ತಿಲ್ಲ. ವಿಶ್ವ ಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜನ ಹಿತಾತ್ಮಕವಾದ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.

ಮಂಗಲಗಿ ಹಿರೇಮಠದ ಡಾ|| ಶಂಭುಲಿಂಗ ಶಿವಾಚಾರ್ಯರು ಮತ್ತು ತೊಟ್ನಳ್ಳಿ ಹಿರೇಮಠದ ಡಾ|| ತ್ರಿಮೂರ್ತಿ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಉಪಾಧ್ಯಕ್ಷ ಹೈದರಾಬಾದ ನಗರದ ಎಂ.ವೀರಮಲ್ಲೇಶ, ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ವಿಜಯಕುಮಾರ ಹೇರೂರು ವಕೀಲರು, ಬಾಬುರಾವ್ ಬಿರಾದಾರ, ಜಗದೇವಯ್ಯ ಹಿರೇಮಠ, ಅರ್ಚಕ ಸೋಮಯ್ಯ ಮತ್ತು ಗಂಗಾಧರ ಪಾಲ್ಗೊಂಡಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿ ನಿರೂಪಿಸಿದರು.

ಶ್ರೀ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ರುದ್ರಾಭಿಷೇಕ-ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನೆರವೇರಿದವು. ಸ್ಥಳೀಯ ಹಾಗೂ ವಿವಿಧೆಡೆಯಿಂದ ಬಂದ ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. ಕಲಬುರ್ಗಿ ನಗರದ ಗಿರಿಯಪ್ಪ ಮುತ್ಯಾ ಅನ್ನ ದಾಸೋಹ ನೆರವೇರಿಸಿದರು.