ಆತ್ಮ ನಿರ್ಭರ ಭಾರತ ಅಲ್ಲ, ಗುಲಾಮಿ ಭಾರತ: ಬಿ.ಆರ್.ಪಾಟೀಲ

ಕಲಬುರಗಿ,ನ.20-ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತದ ಕಲ್ಪನೆ ಬರೀ ಕಲ್ಪನೆಯಾಗಿಯೇ ಉಳಿದಿದೆ. ಆತ್ಮನಿರ್ಭರ ಭಾರತ ಎಂಬ ಸುಂದರ ಪದವನ್ನು ಬಳಿಸಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಆತ್ಮ ನಿರ್ಭರ ಭಾರತ ಅಲ್ಲ, ಗುಲಾಮಿ ಭಾರತವಾಗಿ ದೇಶ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟು ಹೋಗಿದೆ ಎಂದರೆ ಸಚಿವರು ವಿಧಾನಸೌಧದಲ್ಲಿ ಅಂಗಡಿಗಳನ್ನು ತೆರೆದಿದ್ದಾರೆ ಎಂದು ಆರೋಪಿಸಿದರು.
ಅತಿವೃಷ್ಠಿ ಮತ್ತು ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಕಟ್ಟಡ ಹಾಳಾಗಿ ಹೋಗಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಸಂಪರ್ಕವೇ ಕಡಿತವಾದಂತಾಗಿದೆ. ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಬಿಡಿಗಾಸು ಪರಿಹಾರ ನೀಡಿಲ್ಲ. ಹೆಸರು, ಉದ್ದು, ತೊಗರಿ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಕಡಲೆ, ಗೋಧಿ, ಸೂರ್ಯಕಾಂತಿ ಬಿತ್ತನೆ ಮಾಡಿ ಜೀವನ ನಡೆಸಬೇಕೆಂದರು ಸರ್ಕಾರ ಬಿತ್ತನೆ ಬೀಜ ಪೂರೈಕೆ ಮಾಡಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಬಗ್ಗೆ ಕಾಳಜಿಯೇ ಇಲ್ಲ. ಅವರು ಸಂಪುಟ ವಿಸ್ತರಣೆಯಲ್ಲಿಯೇ ದಣಿದಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಅವರು ಬಿಜೆಪಿಯ ದೆಹಲಿ ನಾಯಕರ ಮುಂದೆ ಕೈಕಟ್ಟಿ ನಿಲ್ಲುವುದಕ್ಕಿಂತ ರಾಜೀನಾಮೆ ನೀಡಿ ಹೊರ ಬಂದರೆ ಅವರ ಘನತೆ, ಗೌರವ ಉಳಿಯುತ್ತದೆ ಎಂದರು.
ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಈ ಜನ ವಿರೋಧಿ ಆಡಳಿತದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರದ ಈ ದುರಾಡಳಿತದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.