
ಬೀದರ್:ಮಾ.5: ಆತ್ಮಜ್ಞಾನ ಹಾಗೂ ಅಧ್ಯಾತ್ಮದಿಂದ ಸತ್ಯವಾದ ವಿಜ್ಞಾನ ಅರ್ಥವಾಗಲು ಸಾಧ್ಯವಿದೆ ಎಂದು ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮಿಜಿ ನುಡಿದರು.
ಶುಕ್ರವಾರ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ.ಬಿ.ಜಿ ಮೂಲಿಮನಿ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪೆಇಷತ್ತು ಜಿಲ್ಲಾ ಘಟಕಗಳ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೃಕೃತಿಯಲ್ಲಿ ಒಂದು ಚೈತನ್ಯ ಅಥವಾ ಅದ್ಭುತ ಶಕ್ತಿ ಅಡಗಿದ್ದು, ಅದೇ ನಮ್ಮ ರಕ್ಷಣೆ ಮಾಡುತ್ತಿದೆ ಎಂದರು.
ಮನುಷ್ಯನಲ್ಲಿ ತಿಳುವಳಿಕೆ ಕೊರತೆಯಿಂದ ಇಂದು ಕಣ್ಣಿಗೆ ಕಾಣುವುದೆಲ್ಲವೂ ಮೂಢನಂಬೆಕೆ ಅನಿಸುತ್ತಿದೆ. ಆದರೆ, ಅದರೊಳಗಿರುವ ಶಕ್ತಿ ಅದನ್ನು ರಕ್ಷಿಸುತ್ತಿದೆ ಎಂಬ ಸತ್ಯ ನಮಗೆ ಗೊತ್ತಾಗುವುದಿಲ್ಲವೋ ನಾವು ವೈಚಾರಿಕರಾಗಿ ಹಾಗೂ ವೈಜ್ಞಾನಿಕವಾಗಿ ಬೆಳೆಯಲು ಸಾಧ್ಯವಿಲ್ಲ. ಭಾರತೀಯರ ಬದುಕು ನಿಜವಾದ ವೈಜ್ಞಾನಿಕ ಬದುಕಾಗಿದೆ ಎಂಬುದನ್ನು ಪ್ರತೊಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಸತ್ಯ ಅಡಗಿದೆ ಎಂಬುದು ಗೊತ್ತಾಗಿ ನಮ್ಮ ಪೂರ್ವಜರು ಪೃಕೃತಿಯನ್ನು ಆರಾಧಿಸುತ್ತಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ರಾಂತ ಕುಲಪತಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಅಕಡೆಮಿಯ ಸದಸ್ಯರಾದ ಪ್ರೊ.ಬಿ.ಜಿ ಮೂಲಿಮನಿ ಮಾತನಾಡಿ, 1930ರ ಹೊತ್ತಿಗೆ ದೇಶದಲ್ಲಿ ದೊಡ್ಡ ದೊಡ್ಡ ವಿಜ್ಞಾನಿಗಳು ಇದ್ದರು. ಅವರು ತಮ್ಮ ಸಾಧನೆ, ದೇಶಪ್ರೇಮ ಹಾಗೂ ಅವಿಸ್ಕಾರ ಮೂರನ್ನು ಒಟ್ಟಿಗೆ ಕೊಂಡೊಯ್ಯುತ್ತಿದ್ದರು. ಹಾಗಾಗಿಯೇ ಭಾರತ ವಿಶ್ವಕ್ಕೆ ಗುರುವಾಗಲು ಸಾಧ್ಯವಾಯಿತು. ಭೌತಿಕ ಜಾಗತಿಕ ಸಮಸ್ಯೆಗಳಿಗೆ ವಿಜ್ಞಾನದಿಂದಲೇ ಪರಿಹಾರವಿದೆ. ಆದರೆ, ಕೆಲವರು ವಿಜ್ಞಾನವನ್ನು ಸಂಕುಚಿತ ಮನೋಭಾವದಿಂದ ಕಾಣಿ ಪೃಕೃತಿಗೆ ಅನೇಕ ಕಂಟಕಗಳನ್ನು ತಂದೊಡ್ಡಿದ್ದಾರೆ. ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಇಂದು ಓಜೋನ್ ಪದರು ತೆಳುವಾಗಿ, ಮಂಜು ಕರಗಿ, ಉಷ್ಣತೆ ಹೆಚ್ಚಾಗಿ, ಪ್ರಾಕೃತಿಕ ತಾಪಮಾನ ಉಲ್ಬಣಿಸುತ್ತಿದೆ. ಇದರಿಂದ ಭೀಕರ ಪರಿಣಾಮ ಉಂಟಾಗಿ ಜಗತ್ತು ಎಷ್ಟು ವರ್ಷ ಬದುಕುತ್ತದೋ ಗೊತ್ತಿಲ್ಲ. ಈ ಎಲ್ಲ ದುರಂತಗಳನ್ನು ತಪ್ಪಿಸಲು ನಾವು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಗಿರೀಶ ಕಡ್ಲೆವಾಡ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಶಿಕ್ಷಕರಾದವರು ವೈಜ್ಞಾನಿಕ ಪರಿಕಲ್ಪನೆ ಬಿತ್ತಬೇಕು, ವೈಚಾರಿಕ ಮನೋಭಾವ ಬೆಳೆಸಲು ಮುಂದಾಗಬೇಕು, ಪ್ರಾಥಮಿಕ ಹಂತದಲ್ಲಿಯೇ ಅನ್ವೆಷಣೆ ಹಾಗೂ ಸಂಶೋಧನೆಗೆ ಪ್ರೋತ್ಸಾಹಿಸಬೇಕು. ಒಟ್ಟಿನಲ್ಲಿ ಎಲ್ಲರನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಕಂಡೊಯ್ಯುವ ವಾತಾವರಣ ನಿರ್ಮಾಣ ಮಾಡಲು ಇಂತಹ ವಿಜ್ಞಾನ ದಿನಾಚರಣೆಗಳು ನಿರಂತರವಾಗಿ ನಡೆಯಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ ಮಾತನಾಡಿ, ‘ದುನಿಯಾ ಮುಠ್ಠಿಮೆ’ ಎನ್ನುವಂಥ ಮಾತು ಇಂದು 5ನೇ ತರಂಗಾಂತರಕ್ಕೆ ಬಂದು ತಲುಪಿದೆ. ನಿನ್ನೆಯ ವಿಜ್ಞಾನ ಇಂದಿಲ್ಲ. ಇಂದಿನ ವಿಜ್ಞಾನ ನಾಳೆ ಇರುವುದಿಲ್ಲ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಇಂದಿನ ಪ್ರಜೆಗಳೆಂಬ ಪರಿಕಲ್ಪನೆ ದಟ್ಟವಾಗಿದೆ ಎಂದವರು ಹೇಳಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಆಶೆಯ ನುಡಿ ನುಡಿಯುತ್ತ, ವಿಜ್ಞಾನಕ್ಕೂ ಹಾಗೂ ಜಾನಪದಕ್ಕೂ ಅಭಿನಾಭಾವ ಸಂಬಂಧವಿದೆ. ಆದ್ದರಿಂದಲೇ ಹಿಂದಿನ ಜನಪದರು ವಿಜ್ಞಾನವನ್ನು ಜಾನಪದದ ಧಾಟಿಯಲ್ಲಿ ಉಪಯೋಗಿಸುತ್ತಿದ್ದರು. ಇವೆರಡರ ಸಂಯಮದಿಂದ ಸಾಹಿತ್ಯ ಹಾಗೂ ವಿಜ್ಞಾನಗಳು ಹತ್ತಿರವಾದವು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರಾದ ಮಹಾರುದ್ರಪ್ಪ ಅಣದುರೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಂದ್ರನಾಥ ಹುಡಗಿಕರ್, ಪ್ರೊ.ಬಿ.ಜಿ ಮೂಲಿಮನಿ ಫೌಂಡೇಶನ್ ಅಧ್ಯಕ್ಷರಾದ ಶಿವಲಿಂಗಪ್ಪ ಜಲಾದೆ ಹಾಗೂ ಇತರರು ವೇದಿಕೆಯಲ್ಲಿದ್ದರು. ಇದೇ ವೇಳೆ ಜಿಲ್ಲೆಯ ಪ್ರಥಮ ವಿಜ್ಞಾನದ ಶಿಕ್ಷಕರಾದ ಪ್ರೊ.ಎಸ್.ಬಿ ಬಿರಾದಾರ, ಸಂಜೀವಕುಮಾರ ಸ್ವಾಮಿ ಸೇರಿದಂತೆ ಸುಮಾರು 20 ಜನ ಸಾಧಕರಿಗೆ ಸಿ.ಎನ್.ಆರ್ ರಾವ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿಚಿಕ್ಷಕರಾದ ಗುಂಡಪ್ಪ ಹುಡಗೆ ವಿಜ್ಞಾನ ಗೀತೆ ಹಾಡಿ, ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ, ಕರ್ನಾಟಕ ಜಾನಪದ ಪರಿಷತ್ತಿನ ತಾಲಾಕಾಧ್ಯಕ್ಷ ಎಸ್.ಬಿ ಕುಚಬಾಳ ಕಾರ್ಯಕ್ರಮ ನಿರೂಪಿಸಿ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.