ಆತ್ಮಹತ್ಯೆ ಮಾಡಿಕೊಂಡಿರುವ ಕಸಾಪಗೆ ಜೀವಬೇಕಿದೆ

 ಚಿತ್ರದುರ್ಗ:ನ.18: ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೇ ನ.21  ನಡೆಯಲಿರುವ ಚುನಾವಣೆ ಬಹಳ ಪ್ರಮುಖವಾಗಿದ್ದು ನಿಜವಾದ ಸಾಹಿತಿಗಳು ಅಧ್ಯಕ್ಷರಾಗಬೇಕು ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲಾ ಕಸಾಪಗೆ ಜೀವತುಂಬಬೇಕು ಹಾಗಾಗಿ ಕವಿಯಾಗಿ, ಸಾಹಿತಿಯಾಗಿ ಮತ್ತು ಹೋರಾಟಗಾರನಾಗಿರುವ ನನಗೆ ಮತನೀಡುವ ಮೂಲಕ ರಾಜ್ಯದಲ್ಲಿಯೇ ಸಮರ್ಥ, ಮಾದರಿಯಾಗಿರುವ ಜಿಲ್ಲಾ ಘಟಕ ರಚನೆಗೆ ಅವಕಾಶ ಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ಮಾಲತೇಶ್ ಅರಸ್ ಹರ್ತಿಕೋಟೆ ಅವರು ಸರ್ವ ಸದಸ್ಯರಲ್ಲಿ ಮನವಿ ಮಾಡಿದ್ದಾರೆ. ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪದ ಎಲ್ಲಾ ಚಟುವಟಿಕೆಗಳನ್ನು ಮಾಡಿದ್ಧೇನೆ. ಸಾಹಿತ್ಯ-ಸಂಸ್ಕೃತಿ, ನಾಡು-ನುಡಿ ನೆಲ-ಜಲದ ಪ್ರಾಮಾಣಿಕ ಸೇವೆಗಾಗಿ, ಕ್ರಿಯಾಶೀಲ ಸಂಘಟಕನಾಗಿ, ಕನ್ನಡಪರ ಕಾರ್ಯಕರ್ತನಾಗಿ ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದ ಪರಿಚಾರಕನಾಗಿ ಚಿತ್ರದುರ್ಗ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ರಾಜ್ಯದಲ್ಲಿಯೇ ಮಾದರಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ನಮ್ಮ ಗುರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಐದು ವರ್ಷಗಳ ನಂತರ ಬಂದಿದೆ. ಸಾಹಿತ್ಯ ಕ್ಷೇತ್ರ ಚುರುಕಿರಲು ಸಹಕಾರಿಯಾಗುವ ಏಕೈಕ ಸಂಸ್ಥೆ ಇದಾಗಿದ್ದು, ಈಗಾಗಲೇ ಕಸಾಪ ಸದಸ್ಯರು, ಜಿಲ್ಲೆಯ ಎಲ್ಲಾ ಕನ್ನಡಪರ ಹೋರಾಟಗಾರರು, ಚಿಂತಕರು, ಹಾಗೂ ಗೆಳೆಯರೊಂದಿಗೆ ಚರ್ಚೆ ಮಾಡಿದ್ದೇನೆ. ನಮ್ಮೊಂದಿಗೆ ಸಮಾನ ಮನಸ್ಕರು ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಕಸಾಪ ಸದಸ್ಯರ ಸಭೆ ನಡೆಸಿದ್ಧೇವೆ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹಾಲಿ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯಿಂದ ಅನೇಕ ಮನಸುಗಳಿಗೆ ನೋವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಐದು ವರ್ಷಗಳಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಹಾಲಿ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳು ಇಂದು ಕಸಾಪವನ್ನು ಸದಸ್ಯರೇ ಮರೆಯುವಂತೆ ಮಾಡಿದ್ದು ವಾಸ್ತವ. ತಾಲೂಕುಗಳಲ್ಲಿ ಮತ್ತು ಜಿಲ್ಲೆಯಲ್ಲಿ ಅಜೀವ ಸದಸ್ಯರ ಸಭೆಗಳು ನಡೆಯದೆ ಕಸಾಪ ಕತ್ತಲೆಕೋಟೆಯಲ್ಲಿ ಬಂಧಿಯಾಗಿತ್ತು. ಇನ್ನೂ ಅದನ್ನು ಬದಲಿಸುವ ಕಾಲ ಬಂದಿದೆ. ಇಂದು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ ಜನೋಪಯೋಗಿಯಾಗಿ, ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಗುರಿ ನಮ್ಮಮುಂದಿದೆ ಎಂದು ಅವರು ತಿಳಿಸಿದ್ದಾರೆ.