ಆತ್ಮಹತ್ಯೆ ಗೆ ಪ್ರಚೋದಿಸಿದ ಹೊಸಪೇಟೆ
ಪತ್ರಕರ್ತನ ಮೇಲೆ ಕೇಸು


(ಸಂಜೆವಾಣಿ ವಾರ್ತೆ)
 ಬಳ್ಳಾರಿ, ಸೆ.09:  ಕುಟುಂಬವೊಂದನ್ನು ಪೆಟ್ರೋಲ್ ಸುರಿದುಕೊಂಡು  ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಮೇಲೆ ಹೊಸಪೇಟೆಯ  ಪತ್ರಕರ್ತನ ವಿರುದ್ದ ಅಲ್ಲಿನ   ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ. ಪೋಲಪ್ಪ ಹಾಗೂ ಅವರ ಕುಟುಂಬದ ಆರು ಜನ ಸದಸ್ಯರು ಆ. 30ರಂದು ಹೊಸಪೇಟೆಯ ಎಸ್ಪಿ ಕಚೇರಿಯ ಮುಂದೆ  ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ವೇಳೆ ಸ್ಥಳದಲ್ಲಿದ್ದ ‘ಜಾಗೃತಿ ಬೆಳಕು’ ಪತ್ರಿಕೆಯ ವರದಿಗಾರ ಮಹಮ್ಮದ್ ಗೌಸ್ ಅವರು ಕೈಸನ್ನೆ ಮೂಲಕ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳುವಂತೆ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ. ಪ್ರಚೋದನೆಗೆ ಸಂಬಂಧಿಸಿದ ವಿಡಿಯೊ ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ಸಚಿವ ಆನಂದ್ ಸಿಂಗ್ ಅವರು ಪೆಟ್ರೋಲ್ ಸುರಿದು ಸುಟ್ಟು ಹಾಕುತ್ತೇನೆ ಎಂದು ನನ್ನ ಮನೆಗೆ ಬಂದು ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದರು. ಅದೇ ದಿನ ಎಸ್ಪಿ ಕಚೇರಿಗೆ ದೂರು ಕೊಡಲು ಹೋದಾಗ ಎಸ್ಪಿ ಇರಲಿಲ್ಲ. ಬೇಸತ್ತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ಅನಂತರ ಪೊಲೀಸರು ಬಂದು ತಡೆದರು ಎಂದು ಡಿ. ಪೋಲಪ್ಪ ಲಿಖಿತ ದೂರು ನೀಡಿದ್ದರು.