ಆತ್ಮಸ್ಥೈರ್ಯ ತುಂಬಿದ ಕಾಂಗ್ರೆಸ್ ಮುಖಂಡರು.

ಹರಪನಹಳ್ಳಿ.ಜೂ.೧೧:  ಬ್ಲಾಕ್ ಕಾಂಗ್ರೆಸ್ ವತಿಯಿಂದ  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೆಂಟರ್ ಗೆ ತೆರಳಿ ಕೊರೋನಾ ಸೋಂಕಿತರಿಗೆ ಉಪಹಾರ, ಹಣ್ಣು, ನೀರಿನ ಬಾಟಲ್, ಮಾಸ್ಕ್ ನೀಡಿ ಅವರಿಗೆ ಆತ್ಮ ಸ್ಥೈರ್ಯ ತುಂಬಿ‌ ನಾವು ನಿಮ್ಮ ಜೊತೆಗಿದ್ದೇವೆ ಎಂದು ಧೈರ್ಯ ಹೇಳಲಾಯಿತು.ಈ ವೇಳೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್ ಮಾತನಾಡಿ ಕೊವೀಡ್ ಸೆಂಟರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಆಸ್ಪತ್ರೆಗೆ ಒದಗಿಸಬೇಕು ಎಂದ ಅವರು, ಆಸ್ಪತ್ರೆಯಲ್ಲಿ ಅಷ್ಟೇನೂ ಸ್ವಚ್ಛತೆ ಇರಲಿಲ್ಲ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ಸೋಂಕನ್ನು ನಿಯಂತ್ರಿಸಲು ಸ್ವಚ್ಛತೆಯೇ ಮುಖ್ಯ ಹಾಗಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಟಿ.ಭರತ್ ಮಾತನಾಡಿ ರಾಜ್ಯ ಸರ್ಕಾರ ಕೋವಿಡ್ ಲಸಿಕೆಯನ್ನು ವಿತರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದ ಅವರು ಶಾಸಕ ಜಿ.ಕರುಣಾಕರೆಡ್ಡಿ ಅವರೂ ಸಹ ಕ್ಷೇತ್ರದ ಜನರ ಸಮಸ್ಯೆ ಅರಿಯುವಲ್ಲಿ ವಿಫಲವಾಗಿದ್ದಾರೆ. ನೆಪಕ್ಕೆ ಮಾತ್ರ ಆಗೋಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದಾರೆ. ಹಾಗೇನಾದರೂ ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಕಳಕಳಿ‌ ಇದ್ದಿದ್ದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲೇ ವಾಸ್ತವ್ಯ ಹೂಡುತ್ತಿದ್ದರು ಅದರೆ ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಶಾಸಕರನ್ನು ದೂರಿದರು.ಬಳಿಕ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ತೆರಳಿ ಅಲ್ಲಿರುವ ಸೋಂಕಿತರಿಗೆ ಉಪಹಾರ, ಹಣ್ಣು, ನೀರಿನ ಬಾಟಲ್, ಮಾಸ್ಕ್ ನೀಡಿದರು ಜೊತೆಗೆ ಹರಿಹರ ಸರ್ಕಲ್‌ ಬಳಿ ಟೆಂಟ್ ನಲ್ಲಿ ವಾಸ ಮಾಡುತ್ತಿರುವ ನಿರ್ಗತಿಕರಿಗೆ, ಕೂಲಿ ಕಾರ್ಮಿಕರ ಕುಟುಂಬಗಳಿಗೆ ಉಪಹಾರ, ಹಣ್ಣು, ಮಾಸ್ಕ್ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಪಿ‌.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಸಾಬಳ್ಳಿ ಮುತ್ತಗಿ ಜಂಬಣ್ಣ, ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಾಸ್ ಮುಖಂಡರ ಎಂ.ಮಜಿದ್, ಜಾಕೀರ್ ರಾಗಿರೊಟ್ಟಿ, ಕೆ.ನೂರುದ್ದಿನ್, ಗಿಡ್ಡಳ್ಳಿ ನಾಗರಾಜ್, ಎಂ.ಕೆ.ರಾಯಲ್ ಸಿದ್ದಿಕ್ ಉಪಸ್ಥಿತರಿದ್ದರು.