ಆತ್ಮಶಕ್ತಿಯಿಂದ ಕೊರೋನಾದಿಂದ ಪಾರಾಗಬಹುದು: ಎಮ್ಮಿಗನೂರು ವಾಮದೇವ ಶಿವಾಚಾರ್ಯ

ಕಂಪ್ಲಿ, ಮೇ.20: ಕೊರೋನಾ ಸೋಂಕಿತರು ಭಯಬೀಳುತ್ತಿರುವ ಹಿನ್ನೆಲೆ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಸೋಂಕಿತರು ಆತ್ಮಸ್ತೈರ್ಯ ವೃದ್ಧಿಸಿಕೊಂಡಲ್ಲಿ ಮಾತ್ರ ಕೊರೋನಾ ಗೆಲ್ಲಲು ಸಾಧ್ಯ ಎಂದು ಎಮ್ಮಿಗನೂರು ಗ್ರಾಮದ ಹಂಪಿಸಾವಿರ ಮಠದ ವಾಮದೇವ ಮಹಾಂತ ದೇಶೀಕೇಂದ್ರ ಶಿವಾಚಾರ್ಯರು ಸಾರ್ವಜನಿಕರಿಗೆ ಸಲಹೆ ನೀಡಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಾಮದ ಗ್ರಾಪಂ ಆಡಳಿತ, ಕಂದಾಯ, ಆರೋಗ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಲಾಗಿರುವ 50 ಹಾಸಿಗೆಯುಳ್ಳ ಕೊರೊನಾ ಸೋಂಕಿತರ ಆರೈಕೆ ಕೇಂದ್ರಕ್ಕೆ ಬುಧವಾರ ಅವರು ಚಾಲನೆ ನೀಡಿ ಬಳಿಕ ಮಾತನಾಡಿದರು.
ಮೂಲಭೂತವಾಗಿ ಸೋಂಕಿತರಿಗೆ ಚಿಕಿತ್ಸೆಯ ಜೊತೆಜೊತೆಗೆ ಮನೋಸ್ತೈರ್ಯ ಹೆಚ್ಚಿಸುವ ಕೆಲಸ ವೈದ್ಯರಿಂದ ಆಗಬೇಕು. ಇನ್ನು ಸೋಂಕಿತರು ವೈದ್ಯರ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಶೀಘ್ರಗತಿಯಲ್ಲಿ ಚೇತರಿಕೆ ಕಾಣಲು ಸಾಧ್ಯ. ಸರಕಾರದ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವಲ್ಲಿ ಸಾರ್ವಜನಿಕರು ತಮ್ಮ ಬದ್ಧತೆ ಹಾಗು ಜವಾಬ್ದಾರಿಯನ್ನು ತೋರಬೇಕಿದೆ ಎಂದರು.
ಬಳಿಕ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ದಿನೇದಿನೇ ಪಟ್ಟಣ-ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಸೋಂಕಿನ ಹಬ್ಬುವಿಕೆ ತಡೆಗಟ್ಟುವಲ್ಲಿ ಹಾಗು ಮನೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದ ಸೋಂಕಿತರಿಗಾಗಿ ಗ್ರಾಮದಲ್ಲಿ ಪ್ರಾಥಮಿಕ ಆರೈಕೆ ಕೇಂದ್ರ ತೆರೆಯಲಾಗಿದೆ. ಅತಿ ಶೀಘ್ರದಲ್ಲಿಯೇ ಕಂಪ್ಲಿ, ಎರ್ರಂಗಳ್ಳಿ, ಮುಷ್ಟಗಟ್ಟಿ ಗ್ರಾಮಗಳಲ್ಲಿಯೂ ಸಹ ಕೊರೊನಾ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಕರ್ ಗೌಡ ಗ್ರಾ.ಪಂ.ಅಧ್ಯಕ್ಷೆ ಚನ್ನದಾಸರ ಅಂಜಿನಮ್ಮ, ಉಪಾಧ್ಯಕ್ಷೆ ಗುಂಡ್ರಾಣಿ ಮಾರೆಮ್ಮ ಹಾಗೂ ಎಲ್ಲ ಸದಸ್ಯರು, ಪಿಡಿಒ ತಾರು ಲಕ್ಷ್ಮಣ ನಾಯ್ಕ, ತಾ.ಪಂ.ಇಒ ಬಿ.ಬಾಲಕೃಷ್ಣ, ಉಪ ತಹಸೀಲ್ದಾರ ಬಿ.ರವೀಂದ್ರಕುಮಾರ್, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಸೇರಿದಂತೆ ಅನೇಕರಿದ್ದರು.