ಆತ್ಮವಿಶ್ವಾಸದಿಂದ ಬದುಕಿನ ಸವಾಲು ಎದುರಿಸಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.30:- ನಿಚ್ಚಳ ಗುರಿ ಇದ್ದರೆ ಮಾತ್ರ ಸಾಧನೆ ಮಾಡಬಹುದು. ಅದಕ್ಕಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬದುಕಿನ ಸವಾಲುಗಳನ್ನು ಎದುರಿಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇಜಿನಲ್ಲಿ ಬುಧವಾರ ನಡೆದ ಸ್ನಾತಕ ಪದವಿಯ ಸಾಂಸ್ಕøತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅನೇಕ ಸೋಲುಗಳನ್ನು ಕಂಡವರು ನಮಗೆ ಆದರ್ಶಪ್ರಾಯರಾಗುತ್ತಾರೆಯೇ ವಿನಃ ತಕ್ಷಣದಲ್ಲಿ ಏನನ್ನೋ ಸಾಧಿಸಿದವರಲ್ಲ. ಸೋಲುಗಳು ನಮಗೆ ಅನೇಕ ಪಾಠ ಕಲಿಸುತ್ತವೆ. ಅದರಿಂದ ನಾವು ಹೇಗೆ ಇರಬೇಕು, ಹೇಗೆ ಇರಬಾರದು, ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಅರಿತುಕೊಂಡು ನಮ್ಮ ಬದುಕನ್ನು ಸರಿಯಾಗಿ ರೂಪಿಸಿಕೊಳ್ಳಬೇಕು ಎಂದರು.
ನಿಮ್ಮ ಸುತ್ತ ಇರುವ ಸ್ನೇಹಿತರನ್ನು ನೀವು ಗಮನಿಸಿಕೊಳ್ಳಬೇಕು. ಏಕೆಂದರೆ ವಿದ್ಯಾರ್ಥಿಗಳ ವಿಕಾಸದಲ್ಲಿ ಮತ್ತು ಸಾಧನೆಯಲ್ಲಿ ಸ್ನೇಹಿತರು ಪ್ರಮುಖ ಪಾತ್ರ ವಹಿಸುತ್ತಾರೆ. ಸಾಧನೆಯೆಂದರೆ ಕೇವಲ ಸರ್ಕಾರಿ ನೌಕರಿ ಗಳಿಸುವುದೆಂದು ಅರ್ಥವಲ್ಲ. ನಾವು ಏನನ್ನೇ ಸಾಧಿಸಿದರೂ ನಮ್ಮ ಸುತ್ತಮುತ್ತಲಿನವರನ್ನು ದಯೆ ಮತ್ತು ಕರುಣೆಯಿಂದ ಕಾಣಬೇಕು. ಹಾಗಾದಾಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ನಿಮ್ಮ ಪಾತ್ರವಿರುತ್ತದೆ. ಬದುಕೆಂದರೆ ಚಲನಚಿತ್ರದಂತೆ ಅಲ್ಲ. ವಾಸ್ತವದಲ್ಲಿ ಎಲ್ಲವೂ ನಿಧಾನವಾಗಿ ಚಲಿಸುತ್ತದೆ ಎಂಬ ವಾಸ್ತವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಮೊಬೈಲು ಬಳಕೆಯ ಸಾಧಕ-ಬಾಧಕಗಳನ್ನು ತಿಳಿದುಕೊಂಡು ನೀವು ನಿಮ್ಮ ಜೀವನ ರೂಪಿಸಿಕೊಳ್ಳುವುದರತ್ತ ಗಮನಕೊಡಿ ಎಂದು ಸಲಹೆ ನೀಡಿದರು.
ಬೆಂಗಳೂರಿನ ಕೆನರಾ ಬ್ಯಾಂಕ್ ಮುಖ್ಯ ಕಚೇರಿಯ ಸಹಾಯಕ ವ್ಯವಸ್ಥಾಪಕ ಕೆ.ಮಹಾದೇವ ಮಾತನಾಡಿ, ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವುದಕ್ಕೂ ಉತ್ತಮ ಸ್ನೇಹಿತರಿರಬೇಕು. ತಂದೆ-ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳ ಶ್ರಮಿಸುತ್ತಾರೆ ಎಂಬುದನ್ನು ನೆನಪಿಡಿ. ನಿಮ್ಮ ಕೈಯಲ್ಲಿರುವ ಮೊಬೈಲ್ ಬಹಳ ಕೆಟ್ಟದ್ದು. ಅದನ್ನು ಮಿತವಾಗಿ ಬಳಸಿ, ಕಿರಿಯರನ್ನು ಪ್ರೀತಿಯಿಂದ, ಹಿರಿಯರನ್ನು ಗೌರವದಿಂದ ಕಾಣಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಕಾರ್ಯ ನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಜೆಎಸ್‍ಎಸ್ ಮಹಾವಿದ್ಯಾಪೀಠದಿಂದ ಪ್ರಾರಂಭವಾದ ಮೊದಲ ಕಾಲೇಜು ನಮ್ಮದು. ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು ಎಂಬ ಹೆಗ್ಗಳಿಕೆಯಿದೆ. ಆದರೆ ಕಾಲೇಜುಗಳು ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ, ಸೃಜನಶೀಲ ವಿದ್ಯಾರ್ಥಿಗಳನ್ನು ನೀಡುವ ವಿದ್ಯಾಕೇಂದ್ರಗಳಾಗಬೇಕು. ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಅದಕ್ಕಾಗಿಯೇ ಸಾಂಸ್ಕøತಿಕ ಮತ್ತು ಕ್ರೀಡಾ ವೇದಿಕೆಗÀಳು ಅಸ್ತಿತ್ವದಲ್ಲಿರುವುದು.
ಈ ವೇದಿಕೆಗಳ ಮೂಲಕ ಅನೇಕ ವಿದ್ಯಾರ್ಥಿಗಳು ಬಹುಮಾನÀಗಳನ್ನು ಪಡೆದಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ. ಸಾಧಿಸಬೇಕೆಂಬ ಗುರಿ, ಛಲ ಇರುವವರಿಗೆ ಯಾವುದೇ ಮಿತಿಗಳಿರುವುದಿಲ್ಲ. ತಮಿಳುನಾಡಿನ ಅಂಬಿಕಾ ಎಂಬ ಹೆಣ್ಣುಮಗಳು ಗುರಿ, ಮತ್ತು ಛಲದೊಂದಿಗೆ ಉನ್ನತ ಹುದ್ದೆಗೇರಿರುವುದು ಆದರ್ಶ ಪ್ರಾಯವಾದುದು ಎಂದರು.
ಸಮಾರಂಭದಲ್ಲಿ ಸಾಂಸ್ಕøತಿಕ ವೇದಿಕೆಯ ಸಂಚಾಲಕ ಡಾ.ಸಿ.ಆರ್.ಮಧುಸೂದನ್, ಕ್ರೀಡಾ ವೇದಿಕೆಯ ಸಂಚಾಲಕ ಎಂ.ಕಾರ್ತಿಕ್ ಉಪಸ್ಥಿತರಿದ್ದರು. ಸಾಂಸ್ಕøತಿಕ ಮತ್ತು ಕ್ರೀಡೆಗಳ ಸ್ಪರ್ಧೆಗಳÀಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.