ಆತ್ಮವಿಶ್ವಾಸದಿಂದ ಉತ್ತುಂಗದ ಸಾಧನೆ ಸಾಧ್ಯ

ಬೀದರ: ನ.16:ಆತ್ಮವಿಶ್ವಾಸದಿಂದ ಮಾತ್ರ ಜೀವನದಲ್ಲಿ ಉತ್ತುಂಗದ ಸಾಧನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲೆಯವರೇ ಆದ ಮಿಸಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕøತೆ ಅರುಣಾ ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಹಿಳೆಯರು ಯಾವುದರಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ. ಕಾರಣ, ಕೀಳರಿಮೆಯನ್ನು ಬಿಟ್ಟುಕೊಡಬೇಕು ಎಂದು ಸಲಹೆ ಮಾಡಿದರು.

ಸಾಧನೆ ಮಾರ್ಗದಲ್ಲಿ ಅಡ್ಡಿ, ಆತಂಕಗಳು ಎದುರಾಗುವುದು ಸಹಜ. ದೃಢ ಸಂಕಲ್ಪ ಹಾಗೂ ಸತತ ಪ್ರಯತ್ನದಿಂದ ಗುರಿ ತಲುಪಬಹುದು ಎಂದು ತಿಳಿಸಿದರು.

ಕಾಲೇಜಿನ ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ಘಟಕದ ಸಂಚಾಲಕಿ ಡಾ. ವಿದ್ಯಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅಗತ್ಯ ಇದೆ ಎಂದು ಹೇಳಿದರು.

ಸಾಧನೆಗೆ ಪ್ರಾದೇಶಿಕತೆ, ಬಡತನ ಸೇರಿದಂತೆ ಯಾವುದೂ ಅಡ್ಡಿ ಆಗುವುದಿಲ್ಲ. ಛಲವಿದ್ದರೆ ಸಾಧನೆ ಸುಲಭವಾಗಲಿದೆ ಎಂದು ತಿಳಿಸಿದರು.

ಅರುಣಾ ಪಾಟೀಲ ಅವರು ಮಿಸಸ್ ಕ್ವೀನ್ ಆಫ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಇಡೀ ದೇಶವೇ ಬೀದರ್‍ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮಹಿಳೆಯರು, ಮನೆ ಹಾಗೂ ಕುಟುಂಬಕ್ಕೆ ಸೀಮಿತರಾಗಬಾರದು. ಏನನ್ನಾದರೂ ಸಾಧಿಸಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮನೋಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಉಮಾಕಾಂತ ಜಾಧವ ನಿರೂಪಿಸಿದರು. ಸಂಜೀವಕುಮಾರ ಅಪ್ಪೆ ವಂದಿಸಿದರು.

ಕಾಲೇಜಿನ ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.