ಆತ್ಮಬಲ ಬೆಳೆಸಿಕೊಳ್ಳಬೇಕು : ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು

ಕಲಬುರಗಿ:ಜ.31: ವಿದ್ಯಾರ್ಥಿಗಳು ಆತ್ಮಬಲ ಬೆಳೆಸಿಕೊಳ್ಳಬೇಕು ಅದರಿಂದ ಯಶಸ್ಸು ಸಾದ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಮ.ಘ.ಚ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.
ಬುಧವಾರ ಇಲ್ಲಿನ ಪೂಜ್ಯ ಡಾ. ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಕಲಾವಾಣಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
ಒಳ್ಳೆಯ ಆದರ್ಶ ಹಾಗೂ ಸದ್ಗುಣದಿಂದ ದೊಡ್ಡ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪ್ರಯತ್ನ ಹಾಗೂ ಪರಿಶ್ರಮವಿಲ್ಲದೆ, ಏನನ್ನು ಸಾಧಿಸಲು ಆಗುವುದಿಲ್ಲ. ಆದರಿಂದ, ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಸದುಪಯೋಗ ಪಡೆಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಮಯದ ಉಪಯೋಗದಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಉತ್ಸಾಹದಿಂದ ಇರಬೇಕು. ನಿರುತ್ಸಾಹ ಮಾತಿನಿಂದ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಲವಲವಿಕೆಯಿಂದ ಮುನ್ನುಗ್ಗಬೇಕು. ಉನ್ನತ ಜೀವನಕ್ಕೆ ಯಾರು ಕೀಳರಿಮೆ ಇಲ್ಲದಂತೆ ಬದುಕಬೇಕು. ವ್ಯಕ್ತಿತ್ವ ಕೇಳಮುಖವಾಗದೆ, ಮೇಲ್ಮುಖವಾಗಿರಬೇಕು. ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯಿಂದ ಧಾರ್ಮಿಕ ಸಂಸ್ಕಾರ ಬೆಳಸಕೊಳ್ಳಬೇಕು. ನಿತ್ಯ ಪರಮಾತ್ಮನಿಗೆ ನಮಿಸಿದರೆ ಭವಿಷ್ಯದಲ್ಲಿ ಯಶಸ್ಸು ಶತಸಿದ್ದ ಎಂದು ಆಶೀರ್ವಚನ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಮಾತನಾಡಿ, ಅಹಂಕಾರವಿಲ್ಲದೆ ಧರ್ಮ ಕಾರ್ಯ, ಅರಿವಿನ ದಾಸೋಹ ಮಾಡುತ್ತಿರುವವರು ಡಾ.ಬಸವಲಿಂಗ ಪಟ್ಟದೇವರು. ತಬ್ಬಲಿ ಮಕ್ಕಳಿಗೆ ಮಡಿಲಾಗಿ ಸಲಹುತ್ತಿದ್ದಾರೆ. ಸಂಸ್ಕøತಿ, ಸಂಸ್ಕಾರದ ರಾಯಭಾರಿಯಾಗಿದ್ದಾರೆ. ಅವರ ಬಸವ ಮಾರ್ಗವನ್ನು ನಾವೆಲ್ಲರೂ ಅನುಸರಿಸಬೇಕು. ಸ್ಫೂರ್ತಿ ಪಡೆಯಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ, ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಲು ಸಹಕಾರಿಯಾಗುತ್ತದೆ. ಬಸವ ತತ್ವ ಅಳವಡಿಸಿಕೊಂಡಿರುವ ಶರಣಬಸವೇಶ್ವರ ಸಂಸ್ಥಾನವು ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಸ್ತ್ರೀಯರ ಬಾಳಿಗೆ ಶಿಕ್ಷಣ ಬೆಳಕಾಗಬೇಕು. ತವರು ಹಾಗೂ ಗಂಡನ ಮನೆ, ಎರಡನ್ನು ಸಂಬಾಳಿಸುವ ಸಾಮಥ್ರ್ಯ ಇರುವುದು ಹೆಣ್ಣು ದೇಶ ನಡೆಸುವ ಸಾಮಥ್ರ್ಯ ಹೊಂದಿದ್ದಾಳೆ ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಜಮಾನ ಕಾಲದಲ್ಲಿ ಕನ್ನಡ ಕಳಿಸುವುದೇ ಅಪರಾಧ ಎನ್ನುವ ಸಂದರ್ಭದಲ್ಲಿ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಹಾಗೂ ಬಾಲ್ಕಿ ಹಿರೇಮಠ ಸಂಸ್ಥಾನಗಳು ಉರ್ದು ಬೋರ್ಡ್ ಹಾಕಿ ಕನ್ನಡ ಕಲಿಕೆಗೆ ಪೆÇ್ರೀತ್ಸಹ ನೀಡಿದರು. ಶರಣಬಸವೇಶ್ವರ ಸಂಸ್ಥಾನವು ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿದೆ ಎಂದರು.
ಶರಣಬಸವೇಶ್ವರ ದೇವಸ್ಥಾನ ಆವರಣ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ, ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಶರಣಬಸವ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಕಲ್ಯಾಣರಾವ್ ಪಾಟೀಲ್, ದೂರದರ್ಶನ ಕಲಾವಿದ ನವಲಿಂಗ ಪಾಟೀಲ್ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಾನಕಿ ಹೊಸೂರು ವಂದಿಸಿದರು. ಕಲಾವಾಣಿ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ. ಸೀಮಾ ಪಾಟೀಲ್, ಸಂತೋಷಿ ಹಿಪ್ಪರಗಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕೃಪಾಸಾಗರ ಹಾಗೂ ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಕಲಾವಾಣಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮಹಾಲಕ್ಷ್ಮಿ, ಭಾಗ್ಯ, ಸುಸ್ಮಿತಾ ಸೇರಿ ಅನೇಕರು ಇದ್ದರು. ಸಂಗೀತ ವಿಭಾಗದಿಂದ ಪ್ರಾರ್ಥನಾಗೀತೆ ಹಾಡಿದರು. ಕು.ಅಂಬಿಕಾ ಮೈನಾಳ್ ಹಾಗೂ ಕು. ಜವೇರಿಯಾ ಅಂಜುಂ ನಿರೂಪಿಸಿದರು.


ವಿದ್ಯಾವರ್ಧಕ ಸಂಘದಿಂದ ಪಟ್ಟದೇವರಿಗೆ ವಿಶೇಷ ಸನ್ಮಾನ:
ನಗರದ ಪೂಜ್ಯ ಡಾ. ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ನಡೆದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಉದ್ಘಾಟನೆ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನ ವತಿಯಿಂದ ಇತ್ತೀಚಿಗೆ ನಾಡಿನ ಶ್ರೇಷ್ಠ ಪ್ರಶಸ್ತಿಗಳಲ್ಲೊಂದಾದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯರಾದ ಶ್ರೀ ಮ.ಘ.ಚ ಡಾ.ಬಸವಲಿಂಗ ಪಟ್ಟದೇವರು ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರಾದ ಡಾ.ದಾಕ್ಷಾಯಣಿ ಅವ್ವಾಜೀ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.