ಆತ್ಮಜಾಗೃತಿಯೇ ನಿಜವಾದ ಕ್ರಾಂತಿ

ತುಮಕೂರು, ಜು. ೧೫- ಜಗತ್ತು ಕಂಡ ಮಹಾನ್ ದಾರ್ಶನಿಕರಾದ ವೇದವ್ಯಾಸರು, ಭಗವಾನ್ ಬುದ್ಧ, ಶ್ರೀ ಶಂಕರಾಚಾರ್ಯರು ಮತ್ತು ಸ್ವಾಮಿ ವಿವೇಕಾನಂದರ ಪ್ರಕಾರ ನಿಜವಾದ ಕ್ರಾಂತಿಯೆಂದರೆ ಆತ್ಮಜಾಗೃತಿಯನ್ನು ಸಾಧಿಸುವುದು. ಈ ಹಿನ್ನೆಲೆಯಲ್ಲಿ ವೈಯುಕ್ತಿಕ ಮನಸ್ಸಿನ ನಿಗ್ರಹ ಮತ್ತು ಮಾನವೀಯ ಸಂಬಂಧಗಳು ಹಾಗೂ ಮಾನವೀಯ ಸೇವಾ ಸಂಸ್ಥೆಗಳನ್ನು ನಿಯಂತ್ರಿಸಲು ನೈತಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಯ ಅವಶ್ಯಕತೆ ಇದೆ. ಇಂತಹ ಕ್ರಾಂತಿಯ ಮೂಲವು ಅದ್ವೈತ ಸಿದ್ಧಾಂತದಲ್ಲಿ ಮಾತ್ರ ಲಭ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀರವರು ಹೇಳಿದರು.
ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಶ್ರೀ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ಸತ್ಸಂಗದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾವಿಂದು ವೈಜ್ಞಾನಿಕ, ನಾಗರಿಕ ಮತ್ತು ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆಂಬ ಹಮ್ಮು ಬಿಮ್ಮುಗಳಿವೆ. ಆದರೆ ಪ್ರಾಮಾಣಿಕತೆ ಎಂಬುದು ಮರೀಚಿಕೆಯಾಗಿದೆ. ವಾಸ್ತವ ಸಂಗತಿಯೆಂದರೆ, ಪ್ರಾಮಾಣಿಕತೆ ಎಂಬ ಸದ್ಗುಣ ಕುರಿತಾಗಿ ಅದೆಷ್ಟೇ ಹೇಳಿದರೂ ಕೇಳಿದರೂ ಸಮಾಜವನ್ನು ಏಕಕಾಲದಲ್ಲಿ ಒಟ್ಟಿಗೆ ಸಜ್ಜನವಾಗಿಸಲಾಗದು ಎಂದರು.
ವಿವಿಧ ವಿಕಾಸದ ಹಂತಗಳಲ್ಲಿರುವ ಮಾನವರು ತಮ್ಮ ಅಲ್ಪ ಅಭಿರುಚಿಗಳನ್ನು ಉದಾತ್ತೀಕರಿಸಿಕೊಂಡು ಉನ್ನತವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾ ಕ್ರಮೇಣ ಆದರ್ಶದ ಎತ್ತರಕ್ಕೆ ಏರಬೇಕೆಂಬ ವಾಸ್ತವವನ್ನು ಅರಿಯಬೇಕಿದೆ. ಈ ನಿಟ್ಟಿನಲ್ಲಿ ಹಕ್ಕು ಬಾಧ್ಯತೆಗಳ ಕಲ್ಪನೆ ಮತ್ತು ಸವಲತ್ತುಗಳ ಕಲ್ಪನೆಗಿಂತ ಅರಿವಿನ ಬೆಳಕಿನತ್ತ ಸಾಗುವುದು ಪ್ರಗತಿಪರವೆನಿಸುತ್ತದೆ. ಇದನ್ನೇ ಸನಾತನ ಭಾರತವು ಸಣ್ಣತನವಿಲ್ಲದ ಮತ್ತು ಉದಾತ್ತ ಮನಸ್ಸಿನ ಶ್ರೇಷ್ಠ ಮಾನವನನ್ನು ಆರ್ಯ ಎಂದು ಕರೆದದ್ದು ಎಂದರು.
ಆರ್ಯ ಎಂದರೆ ಮೂರ್ಖ ಇತಿಹಾಸಕಾರರು ಹೇಳುವ ಬುಡಕಟ್ಟು ಅಲ್ಲ. ಬದಲಾಗಿ ಆರ್ಯ ಎಂಬ ಪದವು ವೇದಕಾಲದಲ್ಲೂ ಇತ್ತು ಮತ್ತು ಬುದ್ಧನ ಕಾಲದಲ್ಲಿಯೂ ಮುಂದುವರೆಯಿತು. ಅಲ್ಲದೆ ಶ್ರೀಕೃಷ್ಣನು ಹೇಳುವಂತೆ ಸಂಭಾವಿತನಾದವನಿಗೆ ಅಪಕೀರ್ತಿ ಎಂಬುದು ಮರಣಕ್ಕಿಂತಲೂ ಘೋರ. ಇಂತಹ ಶ್ರೇಷ್ಠ ಕಾರ್ಯವನ್ನು ಸಾಧಿಸಬೇಕಾದರೆ ರಾಮಾಯಣವು ಪ್ರತಿಪಾದಿಸುವಂತೆ ಬೇಸರವಿಲ್ಲದ ಉತ್ಸಾಹ, ದಕ್ಷತೆ ಮತ್ತು ಸೋಲೊಪ್ಪಿಕೊಳ್ಳದ ಮನೋಭಾವಗಳು ಬದುಕಿನಲ್ಲಿ ಔನ್ನತ್ಯವನ್ನು ಸಾಧಿಸಲು ಅನಿವಾರ್ಯ. ಆದ್ದರಿಂದಲೇ ಭಾರತೀಯ ದಾರ್ಶನಿಕರು ಗುರುಗಳಾಗಿ ವ್ಯಕ್ತಿ ಮತ್ತು ಸಮಾಜವನ್ನು ತಿದ್ದಿ ಸರಿ ದಾರಿಯಲ್ಲಿ ಸಾಗಲು ಅಪಾರ ಮಾರ್ಗದರ್ಶನ ಸಂದೇಶಗಳನ್ನಿತ್ತರು ಎಂದು ಹೇಳಿದರು.
ಪೂಜ್ಯ ಸ್ವಾಮಿ ಪರಮಾನಂದಜೀಯವರು ಉಷಃಕೀರ್ತನೆ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಸ್ವಾಮಿ ಧೀರಾನಂದಜೀ ಮತ್ತು ಆಶ್ರಮದ ವಿದ್ಯಾರ್ಥಿಗಳು ಶ್ರೀ ರಾಮಕೃಷ್ಣ ಹೋಮವನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.