ಆತುರಾತುರವಾಗಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಣೆ ಹಿಂದಿನ ಉದ್ದೇಶವೇನು ? ಸಿಂಪಿ ಪ್ರಶ್ನೆ

ಕಲಬುರಗಿ,ಸೆ.7-ಇದೇ ತಿಂಗಳ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಮುಂದಾಗಿದೆ. ಆದರೆ, ಹೈದ್ರಾಬಾದ ಕರ್ನಾಟಕ ವಿಮೋಚನೆಗೊಂಡು 75 ವರ್ಷ ಪೂರ್ಣಗೊಳ್ಳುವ ಮೊದಲೇ ಆತುರಾತುರವಾಗಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಿಸುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುವುದನ್ನು ಸ್ಪಷ್ಟ ಪಡಿಸಬೇಕು ಎಂದು ಹಿರಿಯ ಸಾಹಿತ್ಯಕ, ಸಾಂಸ್ಕøತಿಕ ಸಂಘಟಕ ವೀರಭದ್ರ ಸಿಂಪಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಬರೀ ಉತ್ಸವ, ಅಡಿಗಲ್ಲು, ಘೋಷಣೆ, ಪ್ರಚಾರಕ್ಕಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಅಮೃತ ಮಹೋತ್ಸವದಲ್ಲಿ ವಿಮೋಚನಾ ಹೋರಾಟಗಾರರ ತ್ಯಾಗ, ಬಲಿದಾನದ ಸ್ಮರಣೆಯಾಗಬೇಕು, ಈ ಭಾಗದ ಅಭಿವೃದ್ಧಿ ಕೆಲಸಗಳು ಕಾರ್ಯರೂಪಕ್ಕೆ ಬರಬೇಕು, ಇಲ್ಲಿಂದ ಹೋಗಿರುವ ಅದೆಷ್ಟೋ ಯೋಜನೆಗಳು ಮರಳಿ ತಂದು ಕಾರ್ಯ ಆರಂಭಿಸಬೇಕು, ಈ ಭಾಗದ ಕಲೆ, ಸಾಹಿತ್ಯ, ಇತಿಹಾಸವನ್ನು ಪ್ರತಿಬಿಂಬಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಬಂದು ಧ್ವಜ ಏರಿಸಿ ಹೋದರೆ ಸಾಲದು, ಈ ಭಾಗದ ನಿಜವಾದ ಕಲ್ಯಾಣ ಆಗಬೇಕು, ಈ ಭಾಗದ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬೇರೆ ಭಾಗಗಳಂತೆ ಕಲ್ಯಾಣ ಕರ್ನಾಟಕ ಉತ್ಸವವೆಂದು ಪ್ರತ್ಯೇಕವಾಗಿ 3-4 ದಿನ ಆಚರಿಸಬೇಕು ಎಂದು ಒತ್ತಾಯಿಸಿದರು.
ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸೆ.18ರ ಬದಲು 17 ಎಂದು ತಪ್ಪಾಗಿ ಆಚರಿಸಿ ಇತಿಹಾಸಕ್ಕೆ ಮತ್ತು ಈ ಭಾಗಕ್ಕೆ ಅಪಚಾರ ಮಾಡಲಾಗುತ್ತಿದೆ, ಒಮ್ಮೆ ವಿಮೋಚನಾ ದಿನಾಚರಣೆ, ಮತ್ತೊಮ್ಮೆ ಕಲ್ಯಾಣ ಕರ್ನಾಟಕ ಉತ್ಸವ ಎಂದು ತಮಗೆ ಬೇಕಾದಂತೆ ಹೆಸರು ಬದಲಾಯಿಸುತ್ತಿದೆ. ಈ ಭಾಗದ ಜನ ಪ್ರತಿನಿಧಿಗಳು ಇದನ್ನು ತಡಯಬೇಕು ಎಂದು ಆಗ್ರಹಿಸಿದರು.
ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ವಿಮೋಚನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಿಂಪಿ ಒತ್ತಾಯಿಸಿದರು.
ಅಂದಿನ ಹೈದ್ರಾಬಾದ ಸಂಸ್ಥಾನದಲ್ಲಿದ್ದ ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದ ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ವಿಮೋಚನಾ ದಿನಾಚರಣೆ ಆಚರಿಸಲು ಕರೆ ನೀಡಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ಕೇಂದ್ರ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ದೌಲತರಾಯ ಮಾಲಿಪಾಟೀಲ, ರಘೋಜಿ ಅಂಕಲಕರ, ಶಿವಾನಂದ ಕಶೆಟ್ಟಿ, ಅಂಬಾಜಿ ಕೌಲಗಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.