ಆತಂಕ, ಭೀತಿಯಲ್ಲೇ ಅನ್‌ಲಾಕ್

ಬೆಂಗಳೂರು,ಜೂ.೧೩- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣಗಳು ಇಳಿಮುಖವಾಗಿದ್ದರೂ, ಸೋಂಕಿನ ಬಗೆಗಿನ ಭೀತಿ, ಆತಂಕ ಇನ್ನೂ ದೂರವಾಗಿಲ್ಲ. ಈ ಅತಂಕದ ಮಧ್ಯೆಯೇ ನಾಳೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ೧೯ ಜಿಲ್ಲೆಗಳು ಅನ್‌ಲಾಕ್ ಆಗಲಿವೆ. ಸೋಂಕು ಹೆಚ್ಚಿರುವ ೧೧ ಜಿಲ್ಲೆಗಳಲ್ಲಿ ಲಾಕ್‌ಡೌನ್ ಇನ್ನೊಂದು ವಾರ ವಿಸ್ತರಣೆಯಾಗಿದೆ.
ಕೊರೊನಾ ನಿಗ್ರಹಕ್ಕಾಗಿ ರಾಜ್ಯಾದ್ಯಂತ ಜಾರಿಯಾಗಿದ್ದ ೪೭ ದಿನಗಳ ಕಠಿಣ ನಿರ್ಬಂಧಗಳ ಜನತಾಕರ್ಫ್ಯೂ, ಲಾಕ್‌ಡೌನ್ ನಂತರ ಮೊದಲ ಬಾರಿಗೆ ಈ ೧೯ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್‌ಡೌನ್ ಸಡಿಲಿಸಲಾಗುತ್ತಿದ್ದು, ಈ ಅನ್‌ಲಾಕ್ ವೇಳೆ ಕೊರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಮೈ ಮರೆತು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಅನ್‌ಲಾಕ್ ವೇಳೆ ಮೈ ಮರೆಯುವಂತಿಲ್ಲ. ಕೊರೊನಾ ತಡೆಯುವ ಸುರಕ್ಷತಾ ಕ್ರಮಗಳ ಪಾಲನೆ ಅತೀ ಅವಶ್ಯವೆನಿಸಿದೆ.
ಅನ್‌ಲಾಕ್ ಆಗುತ್ತಿರುವ ಜಿಲ್ಲೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಲಾಕ್‌ಡೌನ್‌ನ್ನು ಸಡಿಲಿಸುತ್ತಿಲ್ಲ. ಮಧ್ಯಾಹ್ನ ೨ರವರೆಗೂ ಮಾತ್ರ ಲಾಕ್‌ಡೌನ್ ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದು, ಮಧ್ಯಾಹ್ನ ೨ರ ನಂತರ ಅಂಗಡಿ-ಮುಂಗಟ್ಟುಗಳ ಬಂದ್ ಆಗಲಿವೆ.
ಹಾಗೆಯೇ ನಾಳೆಯಿಂದಲೇ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ಇದರ ಜತೆಗೆ ವಾರಾಂತ್ಯ ಕರ್ಫ್ಯೂವನ್ನು ಜಾರಿ ಮಾಡಲಾಗುತ್ತಿದ್ದು, ಬರುವ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೂ ಸಂಪೂರ್ಣ ಬಂದ್ ಇರಲಿದೆ.
ಸೋಂಕು ಹೆಚ್ಚಿರುವ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಹಾಸನ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಈ ೧೧ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಿದೆ. ಉಳಿದಂತೆ ಸೋಂಕಿನ ಪ್ರಮಾಣ ೫ಕ್ಕಿಂತ ಕಡಿಮೆ ಇರುವ ರಾeಧಾನಿ ಬೆಂಗಳೂರು ಸೇರಿದಂತೆ ೧೯ ಜಿಲ್ಲೆಗಳು ನಾಳೆಯಿಂದ ಅನ್‌ಲಾಕ್ ಆಗಲಿದ್ದು, ಈ ೧೯ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಅವಧಿಯನ್ನು ಮಧ್ಯಾಹ್ನ ೨ರವರೆಗೂ ವಿಸ್ತರಿಸಲಾಗಿದೆ. ೨ ಗಂಟೆ ನಂತರ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಅನ್‌ಲಾಕ್ ಆಗಲಿರುವ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳ ಓಡಾಟ ಇರುವುದಿಲ್ಲ. ಹಾಗೆಯೇ ಮೆಟ್ರೊ ಸಂಚಾರವು ಬಂದ್ ಆಗಲಿದೆ. ನಿರ್ಮಾಣ ಚಟುವಟಿಕೆಗೆ ಸಂಬಂಧಿಸಿದ ಸೀಮೆಂಟ್, ಸ್ಟೀಲ್ ಅಂಗಡಿ, ಹಾರ್ಡ್‌ವೇರ್, ಅಗತ್ಯ ವಸ್ತು, ಮದ್ಯ ಮಾರಾಟ ಅಂಗಡಿಗಳನ್ನೊರತುಪಡಿಸಿ ಉಳಿದ ಅಂಗಡಿಗಳನ್ನು ತೆರೆಯುವಂತಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೂ ಮಧ್ಯಾಹ್ನ ೨ರವರೆಗೂ ವ್ಯಾಪಾರಕ್ಕೆ ಅವಕಾಶವಿದೆ. ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅನುಮತಿಸಲಾಗಿದೆ. ಆಟೋ ಮತ್ತು ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ಇದ್ದು, ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶ, ಪಾರ್ಕ್‌ಗಳನ್ನು ಬೆಳಿಗ್ಗೆ ೫ ರಿಂದ ೧೦ ಗಂಟೆವರೆಗೂ ತೆರೆಯಲು ಅವಕಾಶವಿದೆ.
ಎಲ್ಲ ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು ಶೇ. ೫೦ರ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಇದೆ. ಗಾರ್ಮೆಂಟ್ಸ್‌ಗಳು ಶೇ. ೩೦ರ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ಅಂತರ್ ಜಿಲ್ಲಾ ಓಡಾಟಕ್ಕೂ ಅವಕಾಶವಿದೆ. ಅನ್‌ಲಾಕ್ ಆಗುವ ಜಿಲ್ಲೆಗಳಲ್ಲಿ ನಾಳೆಯಿಂದಲೆ ರಾತ್ರಿ ಕರ್ಫ್ಯೂ ಜತೆಗೆ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ.

ಅನ್‌ಲಾಕ್ ಏನಿರುತ್ತೆ
ಅಗತ್ಯ ವಸ್ತುಗಳ ಮಳಿಗೆ ಮಧ್ಯಾಹ್ನ ೨ರವರೆಗೂ ತೆರೆಯಲು ಅವಕಾಶ,
ಬೀದಿ ಬದಿ ವ್ಯಾಪಾರಿಗಳಿಗೂ ಮಧ್ಯಾಹ್ನ ೨ರವರೆಗೂ ಅವಕಾಶ.
ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅನುಮತಿ.
ಮಧ್ಯಾಹ್ನ ೨ರವರೆಗೂ ಮದ್ಯ ಮಾರಾಟಕ್ಕೂ ಅವಕಾಶ.
ಟ್ಯಾಕ್ಸಿ, ಆಟೋ ಸಂಚಾರಕ್ಕೂ ಅನುಮತಿ.
ಕಾರ್ಖಾನೆ, ಸರ್ಕಾರಿ ಕಚೇರಿಗಳು ಶೇ. ೫೦ರ ಸಿಬ್ಬಂದಿಯೊಡನೆ ಕಾರ್ಯನಿರ್ವಹಿಸಲು ಅವಕಾಶ.
ಮದುವೆಗಳಲ್ಲಿ ೪೦ ಜನರಿಗಷ್ಟೇ ಅವಕಾಶ.

ಏನಿರಲ್ಲ
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸಂಚಾರ ಬಂದ್.
ಮೆಟ್ರೋ ರೈಲು ಓಡಾಟವೂ ಬಂದ್.
ಸಿನಿಮಾ ಮಂದಿರ, ಮಾಲ್, ಜಿಮ್, ಈಜುಕೊಳಗಳು ಬಂದ್.
ಬಟ್ಟೆ, ಮೊಬೈಲ್, ಪಾದರಕ್ಷೆ, ಎಲೆಕ್ಟ್ರಿಕ್, ಪುಸ್ತಕ ಮಾರಾಟ ಅಂಗಡಿ ಬಂದ್.
ಧಾರ್ಮಿಕ ಕೇಂದ್ರಗಳು ಬಂದ್,
ದೇವಾಲಯಗಳಿಗೆ, ಚರ್ಚು, ಮಸೀದಿಗಳಿಗೆ ಭಕ್ತರಿಗೆ ಪ್ರವೇಶವಿಲ್ಲ.
ಸಭೆ-ಸಮಾರಂಭಗಳ ಮೇಲೂ ನಿಷೇಧ.