ಭಯ ಬೇಡ ಶಾಲೆಗೆ ಬನ್ನಿ

ಬೆಂಗಳೂರು,ಆ.೨೧- ರಾಜ್ಯದಲ್ಲಿ ಆ. ೨೩ ಸೋಮವಾರದಿಂದ ೯, ೧೦ ಮತ್ತು ಪಿಯುಸಿ ಭೌತಿಕ ತರಗತಿಗಳನ್ನು ಆರಂಭಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಮಕ್ಕಳು ಯಾವುದೇ ಆತಂಕವಿಲ್ಲದೆ ಶಾಲೆಗೆ ಹಾಜರಾಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಾಗಲಕೋಟೆ, ಬೆಳಗಾವಿ ಪ್ರವಾಸಕ್ಕೆ ಹೊರಡುವ ಮುನ್ನ ಆರ್.ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿವೆ.
ಅತ್ಯಂತ ಕಾಳಜಿಯಿಂದ ಮಕ್ಕಳ ಕಲಿಕೆಗೆ ಅವಕಾಶ ಕೊಡುವ ಜತೆಗೆ ಕೋವಿಡ್ ಸುರಕ್ಷತೆಯೂ ಆಗಬೇಕು. ಈ ದಿಕ್ಕಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸೋಮವಾರದಿಂದ ಶಾಲಾ-ಕಾಲೇಜುಗಳ ಆರಂಭ ಸಂಬಂಧ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿ ಮಕ್ಕಳ ಸುರಕ್ಷತೆಗೆ ನಿರ್ದೇಶನ ನೀಡಿದ್ದೇವೆ. ಯಾವ ರೀತಿ ಮಕ್ಕಳನ್ನು ಕರೆತರಬೇಕು, ಶಾಲಾ ಕೊಠಡಿಗಳಲ್ಲಿ ಆವರನ್ನು ಯಾವ ರೀತಿ ಕೂರಿಸಬೇಕು. ತರಗತಿಗಳನ್ನು ದಿನಾ ಬಿಟ್ಟು ದಿನ ಎಷ್ಟು ಬ್ಯಾಚ್‌ಗಳಲ್ಲಿ ನಡೆಸಬೇಕು. ಎಲ್ಲದ್ದರ ಬಗ್ಗೆಯೂ ಸೂಚನೆ ನೀಡಲಾಗಿದೆ. ಹಾಗೆಯೇ, ಪಾಲಕರ ಅನುಮತಿ ಪಡೆಯುವ ಬಗ್ಗೆಯೂ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.

ಸೋಮವಾರದಿಂದ ಶಾಲೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ವಚ್ಚತೆಯಲ್ಲಿ ತೊಡಗಿರುವುದು.


ಮಕ್ಕಳು ಕಳೆದ ಒಂದೂವರೆ ವರ್ಷಗಳಿಂದ ಶಾಲೆಗೆ ಮಕ್ಕಳು ಹೋಗಿಲ್ಲ, ನಿಧಾನವಾಗಿ ಮಕ್ಕಳು ಶಾಲೆಗೆ ಬರಬೇಕು ಎಂಬ ಉದ್ದೇಶದಿಂದಲೇ ಶಾಲೆಗಳನ್ನು ಆರಂಭಿಸುತ್ತಿದೇವೆ. ಹಂತ ಹಂತವಾಗಿ ಮಕ್ಕಳ ಹಾಜರಿ ಸಂಪೂರ್ಣವಾಗಬೇಕು. ಆ ನಿಟ್ಟಿನಲ್ಲಿ ಎಲ್ಲ ತಯಾರಿ ಮಾಡಿಕೊಂಡೇ ಶಾಲೆ ಆರಂಭಿಸುತ್ತಿದ್ದೇವೆ ಎಂದರು.
ಖುದ್ದು ಭೇಟಿ – ಪರಿಶೀಲನೆ
ಎಲ್ಲ ಶಾಲೆಗಳನ್ನು ಸ್ಯಾನಿಟೈಸ್ ಮಾಡುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸೋಮವಾರ ಶಾಲೆಗಳು ಆರಂಭವಾದ ನಂತರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜತೆ ಬೆಂಗಳೂರಿನಲ್ಲಿ ಕೆಲ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಿ ವ್ಯವಸ್ಥೆಗಳನ್ನು ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು.
ಮಕ್ಕಳ ಪೋಷಕರೂ ಸಹ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸ್ವತಃ ಪೋಷಕರುಗಳು ಕೋವಿಡ್ ಲಸಿಕೆ ತೆಗೆದುಕೊಂಡು ಮಕ್ಕಳು ಶಾಲೆಯಿಂದ ಮನೆಗೆ ಬಂದ ಮೇಲೆ ಅವರ ಮೇಲೆ ನಿಗಾ ಇರಿಸಬೇಕು. ಆರೋಗ್ಯದಲ್ಲಿ ಬದಲಾವಣೆಗಳಾಗುತ್ತಿದೆಯೇ ಎಂಬುದನ್ನು ಗಮನಿಸಬೇಕು ಎಂದರು.

ಶಾಲಾ-ಕಾಲೇಜು ಆರಂಭದ ಬಗ್ಗೆ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅರ್ಧ ದಿನವಷ್ಟೇ ಭೌತಿಕ ತರಗತಿಗಳು ನಡೆಯುತ್ತವೆ.
ಕೋವಿಡ್ ಸೋಂಕಿನ ಪ್ರಮಾನ ಶೇ. ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯ ರಿಂದ ಪಿಯುಸಿವರೆಗೆ ತರಗತಿಗಳನ್ನು ಬೆಳಗಿನ ಅವಧಿಯಲ್ಲಿ ಅರ್ಧದಿನ ನಡೆಸಲಾಗುತ್ತದೆ. ಪ್ರತಿ ತರಗತಿಯ ವಿದ್ಯಾರ್ಥಿಗಳನ್ನು ೧೫ ರಿಂದ ೨೦ ಸಂಖ್ಯೆಗಳಲ್ಲಿ ಬ್ಯಾಚ್‌ಗಳನ್ನಾಗಿ ಮಾಡಲಾಗುತ್ತದೆ ಎಂದರು.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೧೦ ರಿಂದ ೧.೩೦ರವರೆಗೂ ತರಗತಿಗಳು ನಡೆಯುತ್ತವೆ. ಶನಿವಾರ ಬೆಳಿಗ್ಗೆ ೧೦ ರಿಂದ ೧೨.೩೦ರವರೆಗೆ ಮಾತ್ರ ತರಗತಿಗಳು ನಡೆಯಲಿದ್ದು, ಶಾಲೆಗೆ ಹಾಜರಾಗುವ ಮಕ್ಕಳು ಪೋಷಕರ ಅನುಮತಿ ಪಡೆಯುವುದು ಕಡ್ಡಾಯ.
ಶಾಲೆಗೆ ಮಕ್ಕಳ ಹಾಜರಾತಿ ಕಡ್ಡಾಯ ಅಲ್ಲ ಆನ್‌ಲೈನ್ ಮೂಲಕವೂ ಕಲಿಕೆಗೆ ಅವಕಾಶವಿದ್ದು, ಆಯ್ಕೆ ಪೋಷಕರಿಗೆ ಸೇರಿದ್ದು, ಶಾಲೆಗೆ ಹಾಜರಾಗುವ ಮಕ್ಕಳು ಮನೆಯಿಂದಲೆ ಕುಡಿಯುವ ನೀರು ಹಾಗೂ ಉಪಾಹಾರ ತರಬೇಕು.
ಶಾಲೆಗಳಲ್ಲಿ ಅಗತ್ಯವೆನಿಸದ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿನೀರಿನ ವ್ಯವಸ್ಥೆಗೂ ಸರ್ಕಾರ ಸೂಚನೆ ನೀಡಿದೆ.
ಇಡೀ ಶಾಲೆ ಕೊಠಡಿಂiiನ್ನು ಸ್ಯಾನಿಟೈಸ್ ಮಾಡುವಂತೆಯೂ ಸೂಚಿಸಲಾಗಿದೆ.
ನೆಗಡಿ, ಕೆಮ್ಮಿನ ಲಕ್ಷಣವಿರುವ ಮಕ್ಕಳಿಗೆ ಅಂತಹ ವಿದ್ಯಾರ್ಥಿಗಳನ್ನು ಪಾಲಕರ ಮೂಲಕ ಮನೆಗೆ ವಾಪಸ್ ಕಳುಹಿಸುವಂತೆಯೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.