ಆಣೆ ಪ್ರಮಾಣ ಪಾಲಿಟಿಕ್ಸ್: ಮೈಲಾರ ಮಲ್ಲಣ್ಣ ಮಂದಿರದಲ್ಲಿ ಬಿಜೆಪಿ ಬಂಡಾಯ ಶಮನಕ್ಕೆ ಕಸರತ್ತು

(ಸಂಜೆಚಾಣಿ ವಾರ್ತೆ)
ಬೀದರ್: ಮಾ.19:ಭಾಲ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬೀದರ್ ಜಿಲ್ಲೆಯ ಐತಿಹಾಸಿಕ ಕ್ಷೇತ್ರ, ದಕ್ಷಿಣ ಕಾಶಿ ಖ್ಯಾತಿಯ ಮೈಲಾರ ಮಲ್ಲಣ್ಣ ಮಂದಿರದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.
ಪಕ್ಷವು ಯಾರಿಗೇ ಟಿಕೆಟ್ ನೀಡಿದರೂ, ಅವರನ್ನು ಎಲ್ಲರೂ ಸೇರಿ ಪರಸ್ಪರ ಸಹಕಾರ ನೀಡಿ ಗೆಲ್ಲಿಸಿಕೊಂಡು ಬರುವುದಾಗಿ ಕೇಂದ್ರ ಸಚಿವ ಭಗವಂತ ಖೂಬಾ ಸಮ್ಮುಖದಲ್ಲಿ ಆಣೆ, ಪ್ರಮಾಣ ಮಾಡಿದ ಟಿಕೆಟ್ ಆಕಾಂಕ್ಷಿಗಳು.
ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಲಿಂಗಾಯತ ಸಮಾಜದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಡಿ.ಕೆ. ಸಿದ್ರಾಮ್, ಮರಾಠಾ ಸಮಾಜದ ದಿನಕರ ಮೋರೆ, ಜನಾರ್ಧನ ಬಿರಾದಾರ್ ತಮಗ್ಯಾಳ್ ಅವರುಗಳು ಆಣೆ ಪ್ರಮಾಣ ಮಾಡಿದ್ದಾರೆ.
ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಅವರನ್ನು ಶತಾಯ, ಗತಾಯ ಸೋಲಿಸಬೇಕೆಂಬ ಪಣ ತೊಟ್ಟಿರುವ ಬಿಜೆಪಿ ಪಕ್ಷವು, ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳನ್ನು ಒಂದು ಗೂಡಿಸಿ, ಮುಂದೆ ಎದುರಾಗಬಹುದಾದ ಬಂಡಾಯ ಶಮನ ಮಾಡುವ ಕಸರತ್ತಿಗೆ ಇಳಿದಿದೆ.
ಕಾಂಗ್ರೆಸ್‍ನ ಭದ್ರ ಕೋಟೆಯಾಗಿರುವ ಭಾಲ್ಕಿಗೆ ನುಗ್ಗಲು ಬಿಜೆಪಿ ಯತ್ನ ಆರಂಭಿಸಿದ್ದು, ಪ್ರತಿ ಬಾರಿ ಟಿಕೆಟ್ ವಂಚಿತ ಬಂಡಾಯದಿಂದಾಗಿ ಪಕ್ಷ ಸೋಲುತ್ತಿತ್ತು. ಈ ಬಾರಿ ಆರಂಭದಲ್ಲೇ ಬಿಜೆಪಿಯು ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದೆ.