ಆಣೂರ – ಬುಡುಪನಹಳ್ಳಿ ಏತ ನೀರಾವರಿ ಯೋಜನೆಗಳಿಗೆ 409ಕೋಟಿ – ಬಳ್ಳಾರಿ

ಬ್ಯಾಡಗಿ,ಏ5: ತಾಲೂಕಿನಲ್ಲಿ ಆಣೂರ ಮತ್ತು ಬುಡುಪನಹಳ್ಳಿ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಕೆರೆಕಟ್ಟೆಗಳನ್ನು ತುಂಬಿಸಲು ಉದ್ದೇಶಿಸಿದ್ದು, ಇದಕ್ಕಾಗಿ 40ಕೋಟಿ ರೂಗಳ ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದ್ದಾರೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅನುದಾನದಡಿ ಕೈಗೊಂಡಿರುವ ರಾಜೀವಗಾಂಧಿ ಸೇವಾ ಕೇಂದ್ರ, ಘನದ್ರವ್ಯ ತ್ಯಾಜ್ಯ ವಿಲೇವಾರಿ ಘಟಕ, ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ ಹಾಗೂ ನಿರ್ಮಿತಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಲಾಗಿರುವ ವಾಲ್ಮೀಕಿ ಭವನ ಮತ್ತು ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ರೈತರ ಮಹತ್ವಾಕಾಂಕ್ಷಿ ಯೋಜನೆಗಳಾದ ಆಣೂರ ಮತ್ತು ಬುಡುಪನಹಳ್ಳಿ ಏತ ನೀರಾವರಿ ಯೋಜನೆಗಳಿಗೆ 369ಕೋಟಿ ರೂಗಳನ್ನು ಒದಗಿಸಲಾಗಿತ್ತು. ಈಗ ಇದೇ ಯೋಜನೆಯಡಿ ಕ್ಷೇತ್ರದ ಅತಿ ದೊಡ್ಡ ಅಸುಂಡಿ ಕೆರೆಯ ಸಮಗ್ರ ಅಭಿವೃದ್ಧಿಗೆ 14ಕೋಟಿ ಸೇರಿದಂತೆ ವಿವಿಧ ಗ್ರಾಮಗಳ ಕೆರೆಕಟ್ಟೆಗಳನ್ನು ತುಂಬಿಸುವ ಉದ್ದೇಶದಿಂದ 40ಕೋಟಿ ರೂಗಳ ಹೆಚ್ಚುವರಿ ಅನುದಾನವನ್ನು ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದರಿಂದ ಯೋಜನಾ ಗಾತ್ರವು 409ಕೋಟಿ ರೂಗಳಿಗೆ ಏರಿಕೆಯಾಗಿದೆ. ಈ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಕಾಮಗಾರಿಗೆ ಚಾಲನೆಗೊಳಿಸಲಾಗುವುದು ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಕ್ರಿಯಾಶೀಲರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟ್ಯಾಂತರ ರೂಗಳ ಅನುದಾನವನ್ನು ತರುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಕಾರ್ಯವೈಖರಿಯು ನಿಜಕ್ಕೂ ಅಭಿನಂದನೀಯವಾಗಿದ್ದು, ಅದರಲ್ಲೂ ಶೈಕ್ಷಣಿಕ ಕ್ಷೇತ್ರಕ್ಕೆ ಶಾಸಕರು ನೀಡಿರುವ ಆದ್ಯತೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಕಮಲವ್ವ ಕಾಕೋಳ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಸಂಗೂರ ಸಕ್ಕರೆ ಕಾರ್ಖಾನೆ ನಿರ್ದೇಶಕ ಚಂದ್ರಪ್ಪ ಮುಚ್ಚಟ್ಟಿ, ಚೌಡಯ್ಯ ನಿಗಮದ ನಿರ್ದೇಶಕ ಜಿತೇಂದ್ರ ಸುಣಗಾರ, ಶಂಕ್ರಪ್ಪ ಮಾತನವರ, ಸುರೇಶ ಯತ್ನಳ್ಳಿ, ಗ್ರಾಪಂ ಉಪಾಧ್ಯಕ್ಷ ದ್ಯಾಮಪ್ಪ ಪೂಜಾರ, ಟಿಇಓ ಜಯಕುಮಾರ, ಪಿಆರ್’ಡಿ ಎಇಇ ಡಿ.ಎಲ್.ಕಲ್ಲೋಳಕರ, ವಾಯ್.ಕೆ.ಮಟಗಾರ, ಪಿಡಿಓ ಲತಾ ತಬರೆಡ್ಡಿ, ಶೇಖರಗೌಡ ಗೌಡ್ರ, ಗ್ರಾಪಂ ಸದಸ್ಯ ಹೇಮಂತ ಶೆಟ್ಟರ, ಹನುಮಂತಪ್ಪ ಮಾಳಗಿ, ಮಾಲತೇಶ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.