ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ

ಕಲಬುರಗಿ:ಡಿ.29:ಕಲಬುರಗಿಯ ಕರುಣೇಶ್ವರ ನಗರ ಬಡಾವಣೆಯ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಕುವೆಂಪು ಜನ್ಮ ದಿನ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಶೈಕ್ಷಣಿಕ ನಿರ್ದೇಶಕ ಆರ್.ಎಂ.ಶಿಂಧೆ ಅವರು ಸಮಾರಂಭ ಉದ್ಘಾಟಿಸಿ, ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ. ಕಥೆ, ಕವಿತೆ, ಸಣ್ಣಕಥೆ, ಜೀವನ ಚರಿತ್ರೆ, ನಾಟಕ, ವಿಮರ್ಶೆ, ಶಿಶು ಸಾಹಿತ್ಯ, ವ್ಯಕ್ತಿಚಿತ್ರ, ಆತ್ಮಕಥೆ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅವರು ಕೃಷಿ ಮಾಡಿದ್ದಾರೆ ಎಂದರು.
ನಿಸರ್ಗದ ಸೊಬಗು, ದೇಶಪ್ರೇಮ, ಆದರ್ಶದ ಬದುಕಿನ ಹಾದಿ, ಕ್ರಾಂತಿಯ ಮನೋಭಾವ, ಆಧ್ಯಾತ್ಮಿಕತೆ ಮೊದಲಾದ ಎಲ್ಲಾ ವಿಷಯಗಳು ಕುವೆಂಪು ಅವರ ಸಾಹಿತ್ಯದಲ್ಲಿ ಸಮೃದ್ಧವಾಗಿ ಎದ್ದು ಕಾಣುತ್ತವೆ ಎಂದು ನುಡಿದರು.
ಕುವೆಂಪು ಅವರಂತೆ ವಿಶ್ವಮಾನವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜಗತ್ತಿನಲ್ಲಿ ವಿಶ್ವಶಾಂತಿ ನೆಲೆಸುತ್ತದೆ ಎಂದು ಸಹ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವ್ಯಕ್ತಿತ್ವ ಅರಳಲು ಸಾಹಿತ್ಯ ಓದಿ:
ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸಮಗ್ರ ವಿಕಸನಕ್ಕಾಗಿ ಕುವೆಂಪು, ದ.ರಾ.ಬೇಂದ್ರೆ, ಡಿವಿಜಿಯವರ ಸಾಹಿತ್ಯವನ್ನು ಓದಬೇಕು. ಇದರಿಂದಾಗಿ ವಿಶ್ವದರ್ಶನ ಆಗುವುದರ ಜೊತೆಗೆ ವ್ಯಕ್ತಿತ್ವ ಅರಳುತ್ತದೆ ಎಂದು ರೇಣುಕಾ ಪಾಟೀಲ್ ಸಲಹೆ ನೀಡಿದರು.
ಶಿಕ್ಷಕಿ ರತ್ನಾ ಅಳ್ಳಗಿ ಆರಂಭದಲ್ಲಿ ಸ್ವಾಗತಿಸಿದರು. ಶಿಕ್ಷಕ ಆನಂದ ಅವರಾದಕರ್ ನಿರೂಪಿಸಿದರು. ಶಿಕ್ಷಕಿ ಪಾರ್ವತಿ ಪೂಜಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರು ಅಂಬಿಕಾ ರೆಡ್ಡಿ, ಶೋಭಾ ಜವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.