ಆಡಳಿತ ಮಂಡಳಿ – ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ ಸಹಕಾರಿ ಕ್ಷೇತ್ರ ಉಳಿಯಲಿದೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೬: ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ ಮಾತ್ರವೇ ಸಹಕಾರಿ ಕ್ಷೇತ್ರ ಉಳಿಯಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ ಹೇಳಿದರು.  ನಗರದ ಕನ್ನಿಕಾ ಪರಮೇಶ್ವರಿ ಬ್ಯಾಂಕಿನ ಜ್ಞಾನ ದೇಗುಲ ಆವರಣದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಐವರು ಹಿರಿಯ ಸಹಕಾರಿ ಧುರೀಣರಿಗೆ ಹಮ್ಮಿಕೊಂಡಿದ್ದ ಗೌರವ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲೂ ಸಾಕಷ್ಟು ಹಿರಿಯ ಧುರೀಣರು ಸಹಕಾರಿ ಕ್ಷೇತ್ರವನ್ನು ಬಲಿಷ್ಠವಾಗಿ ಬೆಳೆಸಿದ್ದಾರೆ. ಅಂಥಹ ಮಹಾನ್ ಸಾಧಕರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ಸಹಕಾರಿ ಕ್ಷೇತ್ರಕ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ನೀಡಿರುವ ಕೊಡುಗೆ ಅಪಾರವಾದದ್ದುಘಿ. ಇತ್ತೀಚೆಗೆ ಕೇಂದ್ರ ಸರ್ಕಾರ ದೇಶದ ಸಹಕಾರಿ ವಲಯವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.ಸಹಕಾರಿ ವಲಯದ ಬ್ಯಾಂಕುಗಳ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಬೇಕು. ಆಗ ಮಾತ್ರವೇ ಯಾವುದೇ ಬ್ಯಾಂಕಿನ ಪ್ರಗತಿ ಸಾಧ್ಯವಾಗುತ್ತದೆ. ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಅಲ್ಪ ಅವಧಿಯಲ್ಲಿಯೇ 4 ಶಾಖೆಗಳನ್ನು ಆರಂಭಿಸಿ, ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ಹೊಂದಿರುವುದು ಸಾಮಾನ್ಯವಾದ ವಿಷಯವಲ್ಲ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಂಸ್ಥೆಗಳು ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಸನ್ಮಾನ ಸ್ವೀಕರಿಸಿದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿಗಳ ಹೋರಾಟದ ಪರವಾಗಿ ಇಂದು ಸಹಕಾರಿ ಕ್ಷೇತ್ರಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಮುದ್ರಾಂಕ ಶುಲ್ಕ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಆದರೂ ಅನಪೇಕ್ಷಿತ ಧೋರಣೆಗಳನ್ನು ಸಹಕಾರಿ ಕ್ಷೇತ್ರದ ಮೇಲೆ ಹೇರುತ್ತಿರುವುದು ಸರಿಯಲ್ಲ ಎಂದರು.ಖಾಸಗಿ ಬ್ಯಾಂಕುಗಳಲ್ಲಿ ಸಿಗುತ್ತಿರುವ ಸೇವೆ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಸಿಗುತ್ತಿಲ್ಲ. ರಾಷ್ಟಿಥಕೃತ ಬ್ಯಾಂಕುಗಳಲ್ಲಿಅದು ಉತ್ತರ ಭಾರತದ ಸಿಬ್ಬಂದಿಗಳೇ ತುಂಬಿಕೊಅಡಿದ್ದಾರೆ. ಗ್ರಾಮೀಣ ತಾಯಂದಿರು ಈ ಸಿಬ್ಬಂದಿಗಳ ಬಳಿ ಮೂಕ ಭಾಷೆಯಲ್ಲಿಯೇ ವ್ಯವಹಾರ ಮಾಡಬೇಕಿದೆ. ಆದರೆ ಖಾಸಗಿ ಬ್ಯಾಂಕುಗಳಲ್ಲಿ ನಗುಮೊಗದ ಜೊತೆಗೆ ಉತ್ತಮ ಸೇವೆ ಸಿಗುತ್ತಿದೆ. ಇದಕ್ಕೆ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ತಾಜಾ ಉದಾಹರಣೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಅಧ್ಯಕ್ಷ ಬ್ಯಾಂಕಿನ ಆರ್.ಜಿ.ಶ್ರೀನಿವಾಸ ಮೂರ್ತಿ ಮಾತನಾಡಿ,ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ವಲಯದ ಪಾಲು ಶೇ.12 ಕ್ಕೂ ಅಧಿಕ ಇದೆ. ಈ ಕ್ಷೇತ್ರ ಇನ್ನೂ ಪ್ರಗತಿ ಕಾಣಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.