ಆಡಳಿತ ನೀತಿ- ನಿರ್ಧಾರ ಪುಸ್ತಕ ಬಿಡುಗಡೆ

ಮೈಸೂರು,ಜು.23 : -ಇಂದು ಜನಮನ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ `ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರ’ ಎಂಬ ಗ್ರಂಥವನ್ನು ಕೇಂದ್ರ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ನಗರದ ಕಲಾ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರ ಗ್ರಂಥವನ್ನು ಕುರಿತು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ಸುಮಾರು ಇಪ್ಪತ್ತೇಳು ಜನ ಚಿಂತಕರು, ಸಾಹಿತಿಗಳು, ಶಿಕ್ಷಕರು, ರಾಜಕೀಯ ವಿಶ್ಲೇಷಕರು, ಪತ್ರಿಕಾ ಕ್ಷೇತ್ರದಲ್ಲಿ ದಿಗ್ಗಜರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಾಹಿತ್ಯದ ಮಜಲುಗಳಲ್ಲಿ ಅಭಿರುಚಿ ನೋಡಿರುವವರು ಒಂದು ಅತ್ತುತ್ಯಮವಾದ ಗ್ರಂಥವನ್ನು ಬಿಡುಗಡೆ ಮಾಡಿದ್ದಾರೆ.
ಈ ಗ್ರಂಥ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತದ ನೀತಿ ನಿರೂಪಣೆಗಳನ್ನು ಚರ್ಚೆಗೆ ಒಳಪಡಿಸುವಂತ ಗ್ರಂಥವಾಗಿದ್ದು, ಇದು ಅಭಿನಂದನಾ ಗ್ರಂಥ ಅಲ್ಲ ಎಂದು ಲಕ್ಷ್ಮಣ ಕೊಡಸೆ ಸ್ಪಷ್ಟವಾಗಿ ಹೇಳಿದ್ದಾರೆ. ನಾಡಿನ ಜನತೆಗೆ ಈ ಗ್ರಂಥ ಒಂದು ಅಮೂಲ್ಯವಾದ ಕೊಡುಗೆ, ಡಾ.ನಾರಾಯಣ್ ಅವರಿಂದ ಪ್ರಾರಂಭವಾದ ಈ ಗ್ರಂಥ ರಚನೆ, ರಾಮಚಂದ್ರೇಗೌಡರವರೆಗೆ 446 ಪುಟಗಳನ್ನು ಒಳಗೊಂಡಿದೆ. ಅದರಲ್ಲಿ 27 ಜನ ಮಹನೀಯರು ತಮ್ಮದೆ ರೀತಿಯಲ್ಲಿ ಕೊಡುಗೆಯನ್ನು ಈ ಗ್ರಂಥಕ್ಕೆ ನೀಡಿದ್ದಾರೆ. ಆ ಕೊಡುಗೆ ನೀಡಿರುವ ಮಹನೀಯರ ರಚನೆ ಪ್ರಸ್ತುತ ಆಡಳಿತದ ವ್ಯವಸ್ಥೆ ಯುವಜನರಿಗೆ ಚರ್ಚೆಗೆ ಅತ್ಯಂತ ಶಕ್ತಿಶಾಲಿಯಾದ ವಸ್ತುವನ್ನು ಒದಗಿಸಬಹುದು ಎಂದು ಅಭಿಪ್ರಾಯ ಪಟ್ಟರು.
ನಾರಾಯಣ್ ಅವರು ರಾಜಕೀಯ ಒಂದು ಜನ ಸೇವೆ ಎಂದು ಪ್ರಾರಂಭ ಮಾಡಿ, ರಾಮಚಂದ್ರೇಗೌಡರು ನಾಯಕನನ್ನು ಹುಡುಕಿ ಅಂತ ಕೊನೆಗಳಿಸಿದ್ದಾರೆ. ಇದರ ಒಟ್ಟಾರೆ ತಾತ್ಪರ್ಯ, ಪ್ರಜಾಪ್ರಭುತ್ವ, ಸಂವಿಧಾನ ಜಾರಿಯಾಗಲು ಬೇಕಾಗಿರುವ ಸಾಂಸ್ಕೃತಿಕ ನಾಯಕತ್ವ, ಬದ್ಧತೆ ಮತ್ತು ಪ್ರಾಮಾಣಿಕತೆ, ಧೃಢಕಠಿಣ ನಿಲುವನ್ನು ಹೊಂದಿರುವ ರಾಜಕೀಯ ನಾಯಕತ್ವದ ಮೂಲಕ ಹೇಗೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಅನ್ನುವ ವಿಷಯಗಳು, ರಷ್ಯಾದ ಖ್ಯಾತ ಬರಹ ಗಾರರೊಬ್ಬರು ಹೇಳಿದ ಹಾಗೇ ಒಂದು ಉತ್ತಮವಾದ ಸಮಯ ವ್ಯಕ್ತಿಗೆ ಅಂದರೆ ಅದು ರಾಜಕೀಯ ಇರುವ ಸಮಯ, ಆ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ರೈತನಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಶೋಷಿತ ಎಲ್ಲ ವರ್ಗಗಳ ಧಮನಿಗೆ ಉತ್ತಮವಾದ ಕೆಲಸ ಮಾಡಲಿಕ್ಕೆ ಅವಕಾಶವಿದೆ ಎಂದು ಅವರು ಹೇಳಿರುವುದಾಗಿ ತಿಳಿಸಿದರು.
ಇದೇ ಮಾತನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ನಮ್ಮ ಎಲ್ಲ ಸಮಸ್ಯೆಗಳ ಬೀಗದ ಕೈ ಇರುವುದು ರಾಜಕೀಯ ಅಧಿಕಾರದಲ್ಲಿ. ಆ ಅಧಿಕಾರವನ್ನು ಕೊಡುವಾಗ, ಆ ಜಾಗದಲ್ಲಿ ಯೋಗ್ಯರು, ಸಮರ್ಥರು, ವಿವೇಚನೆ ಉಳ್ಳವರು ಇರಬೇಕು ಎಂದು ಹೇಳಿರುವುದನ್ನು ನೆನೆದರು.
ಈ ಗ್ರಂಥ ನಮ್ಮ ದೇಶದ ಧರ್ಮ, ಜಾತಿ ಸಾಮಾಜಿಕ ವ್ಯವಸ್ಥೆ ಇವೆಲ್ಲವನ್ನು ಒಳಗೊಂಡಿದೆ. ಇದರ ವಿಶ್ಲೇಷಣೆಯನ್ನು ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಅವರು ಗ್ರಹಿಸಿ ರಚನೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ, ಚುನಾವಣಾ ಪದ್ಧತಿಗಳು, ಆಡಳಿತ್ಮಾಕ ನಿರ್ಧಾರಗಳು, ಹೋರಾಟದ ಹಿನ್ನೆಲೆಗಳು, ಚುನಾವಣಾ ವ್ಯವಸ್ಥೆ, ಚುನಾವಣಾ ಆಯೋಗದ ಕರ್ತವ್ಯಗಳು, ಹೀಗೇ ಎಲ್ಲ ವಿಷಯಗಳನ್ನು ಹೇಳುತ್ತ, ಸಿದ್ದರಾಮಯ್ಯ ನವರ ಆಡಳಿತದ ವಿಶ್ಲೇಷಣೆಗಳನ್ನು ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಸೋಮನಾಥ ಸ್ವಾಮೀಜಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.