ಆಡಳಿತದ ಗುಣಮಟ್ಟ ಸುಧಾರಣೆ ಮಾಡುವುದು ಲೋಕಾಯುಕ್ತ ಕಾಯ್ದೆಯ ಉದ್ದೇಶ

ಶಹಾಬಾದ: ಜು.28:ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಡಳಿತದ ಗುಣಮಟ್ಟವನ್ನು ಸುಧಾರಣೆ ಮಾಡುವುದು ಲೋಕಾಯುಕ್ತ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ ಎಂದು ಲೋಕಾಯುಕ್ತ ಎಸ್.ಪಿ ಎ.ಆರ್.ಕರ್ನೂಲ್ ಹೇಳಿದರು.

ಅವರು ಬುಧವಾರ ನಗರದ ತಹಸೀಲ್ದಾರ ಕಚೇರಿಯಲ್ಲಿ ಕರ್ನಾಟಕ ಲೋಕಾಯುಕ್ತ ಕಲಬುರಗಿ ಮತ್ತು ಕಂದಾಯ ಇಲಾಖೆ ಸಂಯುಕ್ತಾಶ್ರದಲ್ಲಿ ಆಯೋಜಿಸಲಾದ ಲೋಕಾಯುಕ್ತ ಕಾಯ್ದೆ ಅರಿವು ಮತ್ತು ಸಾರ್ವಜನಿಕ ಕುಂದು ಕೊರತೆ ಅರ್ಜಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ತವ್ಯಪ್ರಜ್ಞೆಯಿಂದ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸರಳವಾಗಿ ಸೇವೆಯಿಂದ ನಿವೃತ್ತಿಯಾಗಬಹುದು. ಅಸಡ್ಡೆ, ವಿಳಂಬ ಇತರೆ ಕರ್ತವ್ಯಲೋಪವನ್ನೆಸಗಿದರೆ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಎಲ್ಲರೂ ಲೋಕಾಯುಕ್ತ ಕಾಯ್ದೆಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗು. ಇದರಿಂದ ಜನಸಾಮಾನ್ಯರು ಸರ್ಕಾರಿ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕ ನೌಕರರು ತಮ್ಮ ಜವಾಬ್ದಾರಿಗಳನ್ನು ಅರಿತು ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ, ಯೋಜನೆಗಳನ್ನು ತಲುಪಿಸಬೇಕು ಎಂದರು.

ಡಿವಾಯ್‍ಎಸ್‍ಪಿ ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ತಾಲ್ಲೂಕು ಮತ್ತು ಜಿಲ್ಲೆಯ ಸರ್ಕಾರಿ ಕಾರ್ಯಾಲಯಗಳಲ್ಲಿ ನಡೆಯುತ್ತಿರುವ ದುರಾಡಳಿತ, ವಿಳಂಬ ನೀತಿ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾರತಮ್ಯ ನೀತಿ ಅನುಸರಿಸುವುದು, ಕಳಪೆ ಕಾಮಗಾರಿ, ಹಣ ದುರುಪಯೋಗ ಕುರಿತ ದೂರುಗಳನ್ನು ಪ್ರಪತ್ರ-1 ಮತ್ತು 2 ರಲ್ಲಿ ಅಫಿಡವಿಟನೊಂದಿಗೆ ಸಲ್ಲಿಸಬಹುದು. ದೂರು ನೀಡುವವರ ವಿವರ, ಯಾರ ವಿರುದ್ಧ ದೂರು, ಆಪಾದನೆ ಏನು ಎನ್ನುವುದು ಸ್ಪಷ್ಟವಾಗಿರಬೇಕು. ಅಲ್ಲದೆ ನಾವು ಮಾಡುವ ಆರೋಪ ಸತ್ಯವಾಗಿದೆ ಎನ್ನುವ ಪ್ರಮಾಣಪತ್ರದೊಂದಿಗೆ ಅಗತ್ಯ ದಾಖಲೆ ನೀಡಬೇಕು. ಅರ್ಜಿಯ ಸ್ಥಿತಿ ಆನ್‍ಲೈನ್‍ನಲ್ಲಿ ನೋಡುವುದಕ್ಕೂ ಅವಕಾಶ ಇದೆ. ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದ ನೈಜತೆ ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇದೇ ಸಮಯದಲ್ಲಿ ನಾಗಪ್ಪ ಬೆಳಮಗಿ ಅವರು ನನಗೆ ನಗರಸಭೆಯಿಂದ ಆಶ್ರಯ ಮನೆ ನೀಡಿಲ್ಲ ಎಂದು ದೂರು ನೀಡಿದರು.ಸಯ್ಯದ್ ವಾಹೀದ್ ಮಿಲತ್ ನಗರದಲ್ಲಿ ಗಾರ್ಡನ್ ಸ್ಥಳದಲ್ಲಿ ನೀರಿನ ಟ್ಯಾಂಕ್ ಮತ್ತು ಮನೆ ಕಟ್ಟಲಾಗುತ್ತಿದೆ.ಅಲ್ಲದೇ ಅಲ್ಲಿರುವ ನಿವೇಶನಗಳನ್ನು ಒಂದೇ ನಿವೇಶ ಐದಾರು ಜನರಿಗೆ ಮಾರಲಾಗಿದೆ ಎಂದು ದೂರು ಸಲ್ಲಿಸಿದರು.ರಸ್ತೆ, ಸೇತುವೆ, ಕಂದಾಯ ಇಲಾಖೆಯ ಸಮಸ್ಯೆ ಕುರಿತು ದೂರುಗಳನ್ನು ಪಡೆದುಕೊಂಡರು. ನಂತರ ಮಾತನಾಡಿದ ಲೋಕಾಯುಕ್ತ ಎಸ್‍ಪಿ ಅವರು ಸರಕಾರಿ ಜಮೀನುಗಳನ್ನು ನಗರಸಭೆಯ ಸುಪರ್ದಿಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಿ. ಮನೆಮನೆಗೆ ಹೋಗಿ ಕಸ ವಿಲೇವಾರಿ ಕೈಗೊಳ್ಳಿ.ರಸ್ತೆಗೆ ತ್ಯಾಜ್ಯ ಹಾಕಿದರೆ ದಂಡ ಹಾಕಿ ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಆರಕ್ಷಕರಾದ ಅಕ್ಕಮಹಾದೇವಿ, ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ,ನಗರಸಭೆಯ ಪೌರಾಯುಕ್ತ ಬಸವರಾಜ ಹೆಬ್ಬಾಳ, ನಗರಸಭೆಯ ಎಇಇ ಮುಜಾಮಿಲ್ ಅಲಂ,ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಸಿಡಿಪಿಓ ಇಲಾಖೆಯ ರವಿ, ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್ ಇತರರು ಇದ್ದರು.


ಜನರು ಸಮಸ್ಯೆಗಳನ್ನು ಹೊತ್ತು ಲೋಕಾಯುಕ್ತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬರದ ಹಾಗೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು.ಕಾಯ್ದೆ ಕಾನೂನು ಭಯದಿಂದ ಕಾರ್ಯ ನಿರ್ವಹಿಸದೇ, ಸ್ವ ಇಚ್ಛೆಯಿಂದ ಕೆಲಸ ಮಾಡಿದರೆ, ಜನರೇ ನಿಮ್ಮನ್ನು ಗುರುತಿಸುತ್ತಾರೆ.ಸರ್ಕಾರಿ ನೌಕರರೇ ಕಾಯ್ದೆ ಉಲ್ಲಂಘಿಸಿದರೇ ಕಠಿಣ ಪರಿಸ್ಥಿತಿಗಳಿಗೆ ಸಿಲುಕಬೇಕಾಗುತ್ತದೆ-ಲೋಕಾಯುಕ್ತ ಎಸ್.ಪಿ ಎ.ಆರ್.ಕರ್ನೂಲ್