ಆಡಳಿತದಲ್ಲಿ ಕುಟುಂಬಸ್ಥರ – ಹಿಂಬಾಲಕರ ಹಸ್ತಕ್ಷೇಪಕ್ಕೆ ಆಸ್ಪದ ನೀಡದಿರಲಿ’ : ಮುಖ್ಯಮಂತ್ರಿಗೆ ನಿವೃತ್ತ ಐಎಎಸ್ ಅಧಿಕಾರಿ ಎಂ.ವಿ.ವೇದಮೂರ್ತಿ ಸಲಹೆ

ಶಿವಮೊಗ್ಗ, ಸೆ. 25: ‘ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ, ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಆಡಳಿತ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ
ರೀತಿ ಆಡಳಿತದಲ್ಲಿ ಸುಗಮತೆ ಕಾಯ್ದುಕೊಳ್ಳಬೇಕಾದರೆ, ಕುಟುಂಬಸ್ಥರ ಹಾಗೂ ಹಿಂಬಾಲಕರ
ಹಸ್ತಕ್ಷೇಪಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕಾಗಿದೆ’ ಎಂದು ನಿವೃತ್ತ ಐ.ಎ.ಎಸ್.
ಅಧಿಕಾರಿ ಹಾಗೂ ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ
ಎಂ.ವಿ.ವೇದಮೂರ್ತಿರವರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಶಿವಮೊಗ್ಗ
ನಗರಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೊಮ್ಮಾಯಿರವರು ಅತ್ಯಂತ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಾಗೆಯೇ ಆಡಳಿತ ಯಂತ್ರಕ್ಕೆ ಅವರು ಚುರುಕು ನೀಡಬೇಕಾಗಿದೆ. ನಾಗರೀಕರ ಸಮಸ್ಯೆಗಳಿಗೆ
ಕಾಲಮಿತಿಯಲ್ಲಿ ಸ್ಪಂದಿಸಬೇಕಾಗಿದೆ. ಈ ಕಾರಣದಿಂದ ಜಿಲ್ಲಾ ಹಂತಗಳಲ್ಲಿ ನಿಯಮಿತವಾಗಿ
ಪ್ರಗತಿ ಪರಿಶೀಲನೆ ನಡೆಸಬೇಕು. ಕಾಲಮಿತಿಯಲ್ಲಿ ಕಡತ ವಿಲೇವಾರಿಗೆ ಕ್ರಮಕೈಗೊಳ್ಳಬೇಕು
ಎಂದು ಸಲಹೆ ನೀಡಿದ್ದಾರೆ.
ಯಾರಿಗೂ ಅಧಿಕಾರ ಶಾಶ್ವತವಲ್ಲ. ಹಾಗೆಯೇ ಅಧಿಕಾರದ ಹಪಾಹಪಿಯೂ ಇರಬಾರದು.
ಜನಪ್ರತಿನಿಧಿಗಳಿಗೆ ಅವಕಾಶ ಸಿಕ್ಕಾಗ ಉತ್ತಮ ಆಡಳಿತ ನೀಡಬೇಕು. ನೊಂದವರಿಗೆ
ನೆರವಾಗಬೇಕು. ಅಭಿವೃದ್ದಿಗೆ ಶ್ರಮಿಸಬೇಕು. ಪಾರದರ್ಶಕ ಆಡಳಿತ ನಿರ್ವಹಿಸಿಕೊಂಡು
ಬರಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ತಾವು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವೇಳೆ, ಸ್ಥಗಿತಗೊಂಡಿದ್ದ ವಿಮಾನ
ನಿಲ್ದಾಣ ಕಾಮಗಾರಿ ಪುನಾರಾರಂಭಕ್ಕೆ ಹಲವು ಕ್ರಮಕೈಗೊಂಡಿದ್ದೆ. ಪ್ರಸ್ತುತ
ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ಸಂತಸ ಉಂಟು ಮಾಡಿದೆ. ಅಂತಾರಾಷ್ಟ್ರೀಯ
ಮಟ್ಟದಲ್ಲಿ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿರುವುದು ಮಧ್ಯ ಕರ್ನಾಟಕ
ವೈಮಾನಿಕ ಕ್ಷೇತ್ರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

‘ಮಠಾಧೀಶರ ರಾಜಕಾರಣ ಸರಿಯಲ್ಲ!’

*** ‘ಕರ್ನಾಟಕ ರಾಜ್ಯದಲ್ಲಿ ಮಠಮಾನ್ಯಗಳಿಗೆ ತನ್ನದೆ ಆದ ಇತಿಹಾಸ, ಪರಂಪರೆಯಿದೆ.
ಹಲವು ಮಠಗಳು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿವೆ. ಆದರೆ ಕೆಲ
ಮಠಗಳ ಸ್ವಾಮೀಜಿಗಳು, ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ನಿಜಕ್ಕೂ
ವಿಷಾದಕರ ಸಂಗತಿಯಾಗಿದೆ. ಇದರಿಂದ ಪ್ರಾಮಾಣಿಕವಾಗಿ ಧರ್ಮ ಹಾಗೂ ಸಮಾಜ ಸೇವೆಯಲ್ಲಿ
ತೊಡಗಿಸಿಕೊಂಡಿರುವ ಮಠಗಳಿಗೆ ಮುಜುಗರವಾಗುತ್ತದೆ’ ಎಂದು ಎಂ.ವಿ.ವೇದಮೂರ್ತಿಯವರು
ಅಭಿಪ್ರಾಯಪಟ್ಟಿದ್ದಾರೆ.
ಧರ್ಮದೊಳಗೆ ರಾಜಕಾರಣ ನುಸುಳದಂತೆ ಎಚ್ಚರವಹಿಸಬೇಕಾಗಿದೆ. ಜಾತಿ ಜಾತಿಗಳನ್ನು
ಎತ್ತಿಕಟ್ಟಿ, ಜನರನ್ನು ಪ್ರಚೋದಿಸುವ ಕಾರ್ಯವಾಗಬಾರದಾಗಿದೆ. ಮಾನವೀಯತೆ, ಹಸಿದವರಿಗೆ
ಅನ್ನ, ಸಂಕಷ್ಟದಲ್ಲಿರುವವರಿಗೆ ನೆರವು, ಶೈಕ್ಷಣಿಕ ಸೇವೆಯಂತಹ ಉದಾತ್ತ ಗುಣಗಳನ್ನು
ಮಠಗಳು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದ್ದರು.