
ಬೀದರ್:ಎ.8: ಆಡಂಬರದ ಆಚರಣೆಗಳಿಂದ ಜನ ದೂರ ಇರಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ನುಡಿದರು.
ಬೀದರ್ ತಾಲ್ಲೂಕಿನ ಮಿರ್ಜಾಪುರ (ಕೆ) ಗ್ರಾಮದ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿ ಪ್ರಯುಕ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ತೋರಿಕೆಗಾಗಿ ಮಾಡುವ ಆಚರಣೆಗಳಿಂದ ಏನೂ ಉಪಯೋಗ ಇಲ್ಲ. ಅದರಿಂದ ಹಣ ವ್ಯರ್ಥವಾಗುವುದೇ ಹೊರತು ಸಮಾಜಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.
ಮದುವೆ, ವಾರ್ಷಿಕೋತ್ಸವ, ಜನ್ಮದಿನ ಸಮಾರಂಭಗಳನ್ನು ಸಮಾಜಮುಖಿಯಾಗಿ ಆಚರಿಸಬೇಕು. ನಿರ್ಗತಿಕರು, ಬಡವರಿಗೆ ವಸ್ತ್ರದಾನ, ಅನ್ನದಾನ ಮಾಡಬೇಕು. ಈ ಮೂಲಕ ದೇವರು ಕೊಟ್ಟ ಸಂಪತ್ತಿನ ಸದ್ಬಳಕೆ ಮಾಡಬೇಕು ಎಂದರು.
ಪಾಶ್ಚಿಮಾತ್ಯ ಸಂಸ್ಕøತಿಯ ಹೊಸ ವರ್ಷ ಆಚರಣೆಯಿಂದ ಯುವಕರು ಹಾಳಾಗುತ್ತಿದ್ದಾರೆ. ಪಾಲಕರು ಮಕ್ಕಳ ಮೇಲೆ ನಿಗಾ ಇಡಬೇಕು. ಅವರಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ದುಶ್ಚಟಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕುಟುಂಬದ ಸದಸ್ಯರು, ನೆರೆ ಹೊರೆಯವರು ಪ್ರೀತಿ, ವಿಶ್ವಾಸದಿಂದ ಬದುಕು ನಡೆಸಬೇಕು. ಪರಸ್ಪರ ಕಷ್ಟ, ಸುಖದಲ್ಲಿ ಭಾಗಿಯಾಗಬೇಕು ಎಂದರು.
ಮಕ್ಕಳು ರಾಮಾಯಣ, ಮಹಾಭಾರತದ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಲಕರ ಸೇವೆ ಮಾಡಬೇಕು. ಉತ್ತಮ ನಾಗರಿಕರಾಗಬೇಕು ಎಂದು ಸಲಹೆ ಮಾಡಿದರು.
ಕಲ್ಲಪ್ಪ ಮಹಾರಾಜ, ಗ್ರಾಮದ ಪ್ರಮುಖರಾದ ಮಾರುತಿ ಮೇತ್ರೆ, ದಶರಥ ಉಟಪಳ್ಳಿ, ಹಣಮಂತ ಬಿರಾದಾರ, ಕಾಮಶೆಟ್ಟಿ ದಡ್ಡೆ, ಶಾಮರಾವ್ ಬಿರಾದಾರ, ಮಹೇಶ ಪಾಟೀಲ, ಬಾಪು ಪಾಟೀಲ ಇದ್ದರು.
ಇದಕ್ಕೂ ಮುನ್ನ ಗ್ರಾಮಕ್ಕೆ ಬಂದ ಡಾ. ಬಸವಲಿಂಗ ಅವಧೂತರನ್ನು ಗ್ರಾಮಸ್ಥರು ಶಿವಾಜಿ ವೃತ್ತದಿಂದ ಕುಂಬ ಕಳಸ ಮೆರವಣಿಗೆಯೊಂದಿಗೆ ಹನುಮಾನ ಮಂದಿರಕ್ಕೆ ಕರೆ ತಂದರು.