ಸಂಡೂರು ಟೆಕ್ಕಿಯ ದಾಖಲೆ ನೀಡಿ ಸಿಮ್ ಪಡೆದಿದ್ದ ಶಾರಿಕ್

ಬೆಂಗಳೂರು,ನ.೨೨- ಮಂಗಳೂರು ಆಟೋ ಸ್ಫೋಟ ಪ್ರಕರಣದ ಆರೋಪಿ ಶಾರಿಕ್, ಸಿಮ್ ಕಾರ್ಡ್ ಪಡೆಯಲು ಬಳ್ಳಾರಿಯ ಸಂಡೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ದಾಖಲೆಗಳನ್ನು ಕೊಟ್ಟಿದ್ದ ಮಾಹಿತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಒಂದೂವರೆ ವರ್ಷದ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಅರುಣ್ ಕುಮಾರ್ ಗೌಳಿ ನಗರದಲ್ಲಿ ಕೆಲ ದಾಖಲೆಗಳನ್ನು ಕಳೆದುಕೊಂಡಿದ್ದು ಆ ದಾಖಲೆಗಳಲ್ಲಿ ಆರೋಪಿ ಸಿಮ್ ಕಾರ್ಡ್ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೂ ಟೆಕ್ಕಿಗೂ ಯಾವುದೇ ಸಂಪರ್ಕ ಇಲ್ಲ ಎಂದು ತನಿಖಾಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ನಗರದಲ್ಲಿ ತಮ್ಮ ದಾಖಲೆ ಕಳೆದುಕೊಂಡಿರುವುದಾಗಿ ತನಿಖಾಧಿಕಾರಿಗಳಿಗೆ ಗೌಳಿ ಹೇಳಿದ್ದು ಅವರು ಎಂಬಿಎ ಪದವೀಧರನಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರಕರಣದ ಸಂಬಂಧ ಮಾಹಿತಿ ಕಲೆ ಹಾಕಲು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಮೈಸೂರಿಗೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಮೈಸೂರಿನಲ್ಲಿ ಶಂಕಿತ ವಾಸವಿದ್ದ ಸ್ಥಳ, ಎಲ್ಲೆಲ್ಲಿ ಓಡಾಟ ನಡೆಸಿದ್ದ, ಯಾರ ಜೊತೆ ಒಡನಾಟವಿತ್ತು, ಯಾವ ಯಾವ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ವಿಳಾಸ ನೀಡಿ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪಡೆದಿದ್ದ ಹಾಗೂ ಎಲ್ಲಿ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ ಎಂಬ ಬಗ್ಗೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಐವರು ಅಧಿಕಾರಿಗಳ ತಂಡ ಇಂದು ಮೈಸೂರಿನಲ್ಲಿ ಶೋಧ ಕಾರ್ಯ ಆರಂಭಿಸಿದ್ದು ಜೊತೆಗೆ ಶಂಕಿತನ ಬಾಡಿಗೆ ರೂಂನಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಲಾಗಿದೆ.
ಸ್ಥಳೀಯ ಪೊಲೀಸರ ತಪಾಸಣೆ:
ಮೈಸೂರು ಪೊಲೀಸರು ನಗರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಹೊರವಲಯದ ಬಡಾವಣೆಗಳಲ್ಲಿ ಹೊಸದಾಗಿ ಬಾಡಿಗೆ ಪಡೆದಿರುವ ಬಾಡಿಗೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಬಾಡಿಗೆ ನೀಡಿರುವ ಮಾಲೀಕರಿಂದ ಮಾಹಿತಿ ಪಡೆಯಲು ಸಹ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಶಂಕಿತ ವಾಸವಿದ್ದ ಮನೆಗೆ ಪೊಲೀಸ್ ಕಾವಲು ಹಾಕಲಾಗಿದೆ.
ಸಿಸಿಟಿವಿ ಕಣ್ಗಾವಲು:
ಪ್ರವಾಸಿಗರ ನಗರಿಯಾದ ಮೈಸೂರಿಗೆ ದೇಶದ ಎಲ್ಲಾ ಕಡೆಯಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಲು ನಗರದ ಪ್ರಮುಖ ವೃತ್ತಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರವಾಸಿಗರ ತಾಣಗಳು, ಹೋಟೆಲ್‌ಗಳ ಬಳಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲು ಸ್ಥಳೀಯ ಪೊಲೀಸರಿಗೆ ಹಾಗೂ ಗುಪ್ತಚರ ಇಲಾಖೆಗೆ ಸೂಚನೆ ನೀಡಲಾಗಿದೆ.