
(ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.16 : – ಬೈಕ್ ಗೆ ಗೂಡ್ಸ್ ಆಟೋ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಬೈಕ್ ಸವಾರರಾದ ನಿಂಬಳಗೆರೆಯ ಅನ್ಸರ್ (30), ಬಯಲುತುಂಬರಗುದ್ದಿ ಗ್ರಾಮದ ವೀರೇಶ್ (35) ಮೃತ ದುರ್ದೈವಿಗಳು. ಮಣಿಕಂಠ ಎನ್ನುವವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಾನಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ:
ಬಯಲುತುಂಬರಗುದ್ದಿ ಗ್ರಾಮದ ಹೊರವಲಯದಲ್ಲಿ ಕಾನಹೊಸಹಳ್ಳಿ ಕಡೆ ಹೊರಟ್ಟಿದ್ದ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಕಾನಹೊಸಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಬಲಿ ಪಡೆದ ಪೈಪ್ ಲೈನ್ ಗುಂಡಿ
ಬಯಲು ತುಂಬರಗುದ್ದಿ ಗ್ರಾಮದಲ್ಲಿ ಕುಡಿವನೀರು ಸರಬರಾಜಿನ ಪೈಪ್ ಲೈನ್ ಗುಂಡಿ ತೋಡಿ 15 ದಿನವಾದರೂ ಗುಂಡಿ ಮುಚ್ಚಿಸಲು ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದರಿಂದ ಎರಡು ಜೀವಗಳು ಬಲಿಯಾಗುವಂತಾಯಿತು ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಪಕ್ಕದಲ್ಲಿದ್ದ ಗುಂಡಿ ತಪ್ಪಿಸುವುದಕ್ಕಾಗಿ ಗೂಡ್ಸ್ ವಾಹನವನ್ನು ಚಾಲಕ ರಸ್ತೆಯ ಬಲ ಭಾಗಕ್ಕೆ ತಿರುಗಿಸಿದ್ದರಿಂದ ಬೈಕ್ ಗೆ ಡಿಕ್ಕಿಯಾಗಿ ಇಬ್ಬರು ಮೃತಪಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.