ಆಟೋ ದರ ಏರಿಕೆ : ಇಂದಿನಿಂದ ಜಾರಿ

ಬೆಂಗಳೂರು,ಡಿ.೧- ಇಂದಿನಿಂದ ನಗರದಲ್ಲಿ ಆಟೊ ದರ ಹೆಚ್ಚಳವಾಗಿದೆ. ಇದು ಪ್ರತಿನಿತ್ಯ ಆಟೊ ಅವಲಂಬಿಸಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಆಟೊ ದರ ಏರಿಕೆ ಬೆನ್ನಲ್ಲೆ ಚಾಲಕರಿಗೆ ತೈಲ ಕಂಪನಿಗಳು ಶಾಕ್ ನೀಡಿದ್ದು, ಆಟೊ ಗ್ಯಾಸ್ ದರವನ್ನು ೩ರೂ.೫ ಪೈಸೆ ಏರಿಕೆಯಾಗಿದೆ.
ತೈಲ ದರ, ಅಡುಗೆ ಅನಿಲ, ಅಗತ್ಯ ವಸ್ತುಗಳ ದರ ಏರಿಕೆಯಿಂದ ನಗರದ ಜನತೆ ತತ್ತರಿಸಿರುವಾಗಲೇ ಆಟೊ ರಿಕ್ಷಾ ಪ್ರಯಾಣ ದುಬಾರಿಯಾಗಿದೆ. ಹೀಗಾಗಿ ಆಟೋದಲ್ಲಿ ಪ್ರಯಾಣಿಸಲು ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಆಟೊ ದರ ಪರಿಷ್ಕರಿಸಿ ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಕೃತ ಆದೇಶ ಹೊರಡಿಸಿದೆ. ದರ ಪರಿಷ್ಕರಣೆ ಕುರಿತಂತೆ ಕೂಲಂಕುಶವಾಗಿ ಪರಿಶೀಲಿಸಿ ದರ ಏರಿಕೆ ಮಾಡಲಾಗಿದೆ.
ಹಲವು ದಿನಗಳಿಂದ ಆಟೊ ದರ ಏರಿಕೆ ಮಾಡುವಂತೆ ಆಟೊ ಚಾಲಕರ ಸಂಘ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಟೊ ದರವನ್ನು ಪರಿಷ್ಕರಣೆ ಮಾಡಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕನಿಷ್ಠ ಪ್ರಯಾಣದರ ೨ ಕಿ.ಮಿ.ಗೆ ಈ ಹಿಂದೆ ೨೫ ರೂ. ಇತ್ತು. ಈಗ ಈ ದರ ೩೦ ರೂ.ಗೆ ಏರಿಕೆಯಾಗಿದೆ. ನಂತರ ಪ್ರತಿ ಕಿ.ಮೀ.ಗೆ ೧೫ ರೂ. ದರ ನಿಗದಿ ಮಾಡಲಾಗಿದೆ. ಕೇವಲ ಆಟೊ ದರ ಮಾತ್ರವಲ್ಲ, ಕಾಯುವಿಕೆಯ ದರವನ್ನೂ ಸಹ ಹೆಚ್ಚಿಸಲಾಗಿದೆ. ಮೊದಲ ೫ ನಿಮಿಷ ಕಾಯುವಿಕೆಗೆ ಉಚಿತವಾಗಿದ್ದು, ೫ ನಿಮಿಷದ ನಂತರ ಪ್ರತಿ ೧೫ ನಿಮಿಷಕ್ಕೆ ೫ ರೂ. ದರ ಹೆಚ್ಚಳ ಮಾಡಲಾಗಿದೆ.
ಈ ಮಧ್ಯೆ ೮ ವರ್ಷದ ಬಳಿಕ ಪ್ರಯಾಣಿಕರ ಲಗೇಜ್ ಸಾಗಾಣಿಕೆ ದರವೂ ನಿಗದಿಪಡಿಸಲಾಗಿದೆ. ೨೦ ಕೆಜಿ ಸರಕು ಸಾಗಾಣಿಕೆಗೆ ಉಚಿತವಾಗಿದ್ದು, ಮೊದಲ ೨೦ ಕೆಜಿಯಿಂದ ನಂತರ ಪ್ರತಿ ೨೦ ಕೆಜಿಗೆ ಅಥವಾ ಅದರ ಭಾಗಕ್ಕೆ ೫ ರೂ. ನಿಗದಿ ಮಾಡಲಾಗಿದೆ.
ಇದರ ಜತೆಗೆ ಗರಿಷ್ಠ ಪ್ರಯಾಣಿಕರ ಲಗೇಜುಗಳು ೫೦ ಕೆಜಿಯೊಳಗೆ ನಿಗದಿಪಡಿಸಲಾಗಿದೆ.
ಆಟೊ ದರ ಏರಿಕೆಗೆ ಚಾಲಕರು ಸಂತಸಗೊಂಡಿರುವ ಬೆನ್ನಲ್ಲೆ ಆಟೊ ಗ್ಯಾಸ್ ದರವೂ ದುಬಾರಿಯಾಗಿದೆ. ಒಂದು ಲೀಟರ್ ಆಟೊ ಗ್ಯಾಸ್ ದರ ೩ರೂ.೫ ಪೈಸೆಯಷ್ಟು ಹೆಚ್ಚಳವಾಗಿದೆ.
ನಿನ್ನೆ ೬೬ ರೂ.ನಷ್ಟಿದ್ದ ಆಟೊ ಗ್ಯಾಸ್ ದರ ೬೯.೫ ಪೈಸೆಯಷ್ಟಾಗಿದೆ. ಆಟೊ ಗ್ಯಾಸ್ ದರ ಏರಿಕೆಯಾಗಿರುವುದಕ್ಕೆ ಆಟೊ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ೨ ಕಿ.ಮೀ ೨ ರೂ.

ನಂತರ ಪ್ರತಿ ಕಿ.ಮೀ ೧೫ ರೂ.

ಮೊದಲ ೫ ನಿಮಿಷ ಕಾಯುವಿಕೆಗೆ ಉಚಿತ.

೫ ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ ೫ ರೂ.

೨೦ ಕೆಜಿ ಲಗೇಜ್ ಸಾಗಾಣಿಕೆ ಉಚಿತ.

೨೧ ಕೆಜಿಯಿಂದ ೫೦ ಕೆಜಿವರೆಗೆ ೫ ರೂ. ದರ ನಿಗದಿ.

ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚಳ (೩೦+೧೫)