ಆಟೋ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ಫುಡ್ ಕಿಟ್ ವಿತರಣೆ

ಕೆ.ಆರ್.ಪೇಟೆ. ಮೇ.31: ಕೋವಿಡ್ ಸಂಕಷ್ಠದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ನಿರ್ಗತಿಕರಿಗೆ ಐದು ಸಾವಿರ ಫುಡ್ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು.
ಪಟ್ಟಣದ ನಂಜಮ್ಮಮುದ್ದೇಗೌಡ ಸಮುದಾಯ ಭವನದಲ್ಲಿ ಆಟೋ ಚಾಲಕರಿಗೆ ಕಿಟ್ ವಿತರಿಸಿ ಮಾತನಾಡಿದ ಸಚಿವರು ಮಂಡ್ಯ ಜಿಲ್ಲೆಯ ಜನತೆಗೆ ಈಗಾಗಲೇ ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಕೋವಿಡ್ ನಿರೋಧಕ ಔಷಧಗಳು ಹಾಗೂ ಶಕ್ತಿವರ್ಧಕ ಮಾತ್ರೆಗಳನ್ನು ಒಳಗೊಂಡಿರುವ 25 ಸಾವಿರ ಔಷಧಗಳ ಮೆಡಿಕಲ್ ಕಿಟ್‍ಗಳನ್ನು ವಿತರಿಸಲಾಗಿದೆ. ಕೋವಿಡ್ ಎರಡನೇ ಅಲೆಯ ಲಾಕ್‍ಡೌನ್‍ನಿಂದಾಗಿ ಸಂಕಷ್ಠದಲ್ಲಿರುವ ಬಡ ಜನರನ್ನು ಗುರುತಿಸಿ ಆಹಾರ ಧಾನ್ಯಗಳ ದಿನಸಿ ಕಿಟ್‍ಗಳನ್ನು ತಯಾರಿಸಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ ಸಚಿವ ನಾರಾಯಣಗೌಡರು ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಎಗ್ಗಿಲ್ಲದೇ ಹರಡುತ್ತಿರುವ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿನಿತ್ಯವೂ ಗ್ರಾಮಗಳಲ್ಲಿ ಗಂಟಲುಧ್ರವದ ಮಾದರಿಯನ್ನು ಸಂಗ್ರಹಿಸಿ ಕೋವಿಡ್ ಸೋಂಕಿತರನ್ನು ಪತ್ತೆಹಚ್ಚುವ ಕಾರ್ಯವು ಭರದಿಂದ ಸಾಗುತ್ತಿದೆ.
ಸೋಂಕಿತರು ಕಂಡು ಬಂದರೆ ಕೂಡಲೇ ಅವರನ್ನು ಕೋವಿಡ್ ಹೆಲ್ತ್ಕೇರ್ ಸೆಂಟರ್‍ಗೆ ಸ್ಥಳಾಂತರಿಸಿ ಗುಣಮಟ್ಟದ ಚಿಕಿತ್ಸೆಯನ್ನು ಕೊಡಿಸಿ ಕೋವಿಡ್ ಸೋಂಕನ್ನು ಗುಣಪಡಿಸಿ ಗ್ರಾಮೀಣ ಜನರನ್ನು ಮರಳಿ ಕ್ಷೇಮವಾಗಿ ಊರಿಗೆ ಕಳಿಸಿಕೊಡುವ ಕೆಲಸವನ್ನು ತಾಲೂಕು ಆಡಳಿತವು ಬದ್ಧವಾಗಿದ್ದು ದಿನದ 24 ಗಂಟೆಗಳ ಕಾಲವೂ ವೈದ್ಯರು ಮತ್ತು ಆರೋಗ್ಯ ಸಿಬ್ಬಂಧಿಗಳು ದುಡಿಯುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಕೋವಿಡ್ ನಿಯಂತ್ರಿಸಲು ತಾಲೂಕು ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕು.
ಪ್ರಧಾನ ಮಂತ್ರಿಗಳಿಂದ ದಕ್ಷ ಪಾರದರ್ಶಕ ಆಡಳಿತ:
ಕೋವಿಡ್ ಸಂಕಷ್ಠದ ಸಮಯದಲ್ಲಿಯೂ ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರಮೋಧಿ ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾ, ಕೋವಿಡ್ ನಿಯಂತ್ರಿಸಲು ವಿಜ್ಞಾನಿಗಳಿಂದ ಲಸಿಕೆಯ ಸಂಶೋಧನೆ ಮಾಡಿಸಿ ದೇಶದ ಎಲ್ಲಾ ರಾಜ್ಯಗಳಿಗೂ ವಿತರಿಸಿ ಇತಿಹಾಸ ನಿರ್ಮಿಸಿರುವ ಮೋದಿಜಿ ಅವರು ಜಾಗತಿಕ ಮಟ್ಟದಲ್ಲಿ ಭಾರತ ದೇಶದ ಕೀರ್ತಿಯನ್ನು ಬೆಳಗುತ್ತಿದ್ದಾರೆ. ದೇಶದ ಪ್ರಧಾನಮಂತ್ರಿಗಳಾಗಿ 7 ವರ್ಷಗಳ ಕಾಲ ದೇಶವನ್ನು ವಿಶ್ವದಲ್ಲಿಯೇ ಮಾದರಿಯಾಗಿ ಮುನ್ನಡೆಸಿರುವ ಮೋದಿ ಅವರು ಈ ರಾಷ್ಟ್ರ ಕಂಡಂತಹ ಅಪರೂಪದ ರಾಜಕಾರಣಗಳಲ್ಲಿ ಒಬ್ಬರಾಗಿದ್ದಾರೆ.
ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೂಮಿಪೂಜೆ:
ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಜಿ.ತಮ್ಮಣ್ಣ, ಬಿಜೆಪಿ ಮಂಡಲ ಅಧ್ಯಕ್ಷರಾದ ಪರಮೇಶ್‍ಅರವಿಂದ್, ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.