ಆಟೋ ಚಾಲಕರ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ರ್ಯಾಲಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೩೦: ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂಚೆ ನೀಡಿದ 5 ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕೆಂದು ಶ್ರೀ ಕೃಷ್ಣ ಸಾರಧಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಶ್ರೀನಿವಾಸ್ ಮೂರ್ತಿ ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಮುಂಚೆ ನೀಡಿದ 5 ಗ್ಯಾರಂಟಿ ಪೈಕಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ವ್ಯವಸ್ಥೆಯಿಂದ ನಮ್ಮ ಆಟೋ ಚಾಲಕರಿಗೆ ಆರ್ಥಿಕವಾಗಿ ಆಟೋ ಚಾಲಕರ ಕುಟುಂಬಗಳು ಬೀದಿ ಪಾಲಾಗಿದ್ದು, ಸಂಕಷ್ಟಕ್ಕೀಡಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ದಿನಕ್ಕೆ ಆಟೋ ಚಾಲಕರು 800 ರಿಂದ 900 ರೂ.ರವರೆಗೆ ಬಾಡಿಗೆ ಮಾಡಿ 250 ರಿಂದ 300 ರೂ. ಇಂಧನ ಹಾಕಿಸಿ ಉಳಿದ ಹಣದಲ್ಲಿ ನಮ್ಮ ಮನೆ ಬಾಡಿಗೆ, ಆಟೋ ಲೋನು, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮುಂತಾದ ಖರ್ಚು ವೆಚ್ಚ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ನಗರ ಸಾರಿಗೆ ಉಚಿತ ಬಸ್ ಪ್ರಯಾಣದಿಂದ ದಿನಕ್ಕೆ 400 ರೂ. ಬಾಡಿಗೆ ಮಾಡಲು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.ಜುಲೈ 3ರಂದು ಬೆಳಿಗ್ಗೆ 11.30ಕ್ಕೆ ನಗರದ ಹೈಸ್ಕೂಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಟೋ ರ್ಯಾಲಿ ನಡೆಸಲಾಗುವುದು. ಆ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದಲ್ಲದೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಜನಪ್ರತಿನಿಧಿಗಳು ಆಟೋ ಚಾಲಕರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.ರಾಜ್ಯದ ಆಟೋ ಚಾಲಕರ ಅಭಿವೃದ್ಧಿ ನಿಗಮ ಮಂಡಳಿ ಮತ್ತು ಮನೆ ಇಲ್ಲದವರಿಗೆ ಮನೆ ಕಲ್ಪಿಸಿಕೊಡಬೇಕು.‌ ಒಂದು ಪಕ್ಷ ತಾವು ಈ ಒಂದು ಗ್ಯಾರಂಟಿಯಿಂದ ಹಿಂದೆ ಸರಿಯುವುದಿಲ್ಲವಾದರೆ ನಮ್ಮ ಆಟೋ ಚಾಲಕರಿಗೆ ದುಡಿಯಲಿಕ್ಕೆ ಉದ್ಯೋಗ ಸೃಷ್ಟಿ ಮಾಡಿ ಅಥವಾ ಪ್ರತಿ ತಿಂಗಳು 20 ಸಾವಿರ ರೂ.ಗಳನ್ನು ಆಟೋ ಚಾಲಕರ ಅಕೌಂಟಿಗೆ ತುಂಬಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ರಾಜ್ಯಾದ್ಯಂತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ಹೆಚ್. ಪರಶುರಾಮ ನಂದಿಗಾವಿ, ಇ. ಮಂಜುನಾಥ್ ಬಾಳೆಕಾಯಿ, ಎನ್.ಓ.ಸಂತೋಷ ಕುಮಾರ್, ಮಂಜುನಾಥ್ ಎಲ್.ಸಂಗೀತ, ಜಿ.ಎಸ್‌. ರುದ್ರೇಶ್ ಇತರರು ಇದ್ದರು.