ಆಟೋ ಚಾಲಕರ ವಿರುದ್ಧ 670 ಕೇಸ್

ಬೆಂಗಳೂರು,ಸೆ.೨೪- ಆಟೋ ಚಾಲಕರ ವಿರುದ್ಧ ಪ್ರಯಾಣಿಕರಿಂದ ಪದೇ ಪದೇ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘನೆ ಮಾಡುವ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಕಳೆದ ಸೆ.೧೪ರಿಂದ ೨೩ರವರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು ೬೭೦ ಪ್ರಕರಣ ದಾಖಲಿಸಿಕೊಂಡು, ೩.೩೬ ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ.
ಚಾಲಕರಿಗೆ ದಂಡ:
ಪ್ರಯಾಣಿಕರಿಂದ ಹೆಚ್ಚಿನ ದರ ಪಡೆಯುತ್ತಿದ್ದ ಆಟೋ ಚಾಲಕರಿಗೆ ಪೊಲೀಸರು ದಂಡದ ಬರೆ ಎಳೆದಿದ್ದಾರೆ. ಈಶಾನ್ಯ ಉಪ ವಿಭಾಗದಲ್ಲಿ ಹೆಚ್ಚು ಹಣ ಪಡೆದ ಆರೋಪದಡಿ ಒಟ್ಟು ೧೪೧ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ೭೨,೦೦೦ ರೂ ದಂಡ ಹಾಕಲಾಗಿದೆ. ಉತ್ತರ ಉಪ ವಿಭಾಗದಲ್ಲಿ ೨೧೩ ಆಟೋ ಚಾಲಕರ ವಿರುದ್ಧ ಕೇಸ್ ದಾಖಲಿಸಿ, ೧.೦೬ ಲಕ್ಷ ರೂ ದಂಡ ಸಂಗ್ರಹಿಸಲಾಗಿದೆ.
ಚಾಲಕರ ವಿರುದ್ಧ ಕ್ರಮ:
ಈಶಾನ್ಯ ಉಪ ವಿಭಾಗದಲ್ಲಿ ಪ್ರಯಾಣಿಕರು ಕರೆದ ಕಡೆ ಬರದ ೯೫ ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ೪೭,೫೦೦ ರೂ ದಂಡ ವಿಧಿಸಲಾಗಿದೆ.
ಉತ್ತರ ಉಪ ವಿಭಾಗದಲ್ಲಿ ಪ್ರಯಾಣಿಕರು ಕರೆದ ಕಡೆ ಬರದ ೨೨೧ ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿ, ೧.೧೦ ಲಕ್ಷ ದಂಡ ವಿಧಿಸಲಾಗಿದೆ.
೧೦ ದಿನಗಳ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು ೬೭೦ ಪ್ರಕರಣ ದಾಖಲಿಸಿಕೊಂಡು ೩.೩೬ ಲಕ್ಷ ರೂ ದಂಡ ವಿಧಿಸಲಾಗಿದೆ ಎಂದು ಸಂಚಾರ ಉತ್ತರ ವಿಭಾಗದ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.