ಆಟೋ ಚಾಲಕರು ಜನಸ್ನೇಹಿ ಚಾಲಕರಾಗಬೇಕು: ಆರ್‍ಟಿಓ ಮುರಗೇಂದ್ರ ಬಿ. ಶಿರೋಳಕರ

ಬೀದರ:ಫೆ.20: ನಗರದಲ್ಲಿ ಆಟೋ ಚಾಲಕರು ಸಾರ್ವಜನಿಕರಿಗೆ ಒಳ್ಳೆಯ ಜನಸ್ನೇಹಿ ಆಟೋ ಚಾಲಕರಾಗಬೇಕು ಎಂದು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಳಕರ ಅವರು ಹೇಳಿದರು.
ಅವರು ಪ್ರಾದೇಶಿಕ ಸಾರಿಗೆ ಕಛೇರಿ ಹಾಗೂ ಬೀದರ ಮೋಟಾರು ವಾಹನ ತರಬೇತಿ ಶಾಲೆಯ ಸಂಘದ ಸಂಯೋಗದಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ನಡೆದ ಆಟೋ ಚಾಲಕರ ರಸ್ತೆ ಸುರಕ್ಷತೆ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಿ ಹೇಳಿದರು.
ಅವರು ಮುಂದೆ ಮಾತನಾಡುತ್ತ ಆಟೋ ಚಾಲಕರು ವಾಹನದ ಎಲ್ಲಾ ದಾಖಲೆಗಳು ಇಟ್ಟುಕೊಂಡು, ಸವಸ್ತ್ರ ಧರಿಸಿ ಆಟೋ ಚಲಾಯಿಸಬೇಕು ಮತ್ತು ಸಾರ್ವಜನಿಕರಿಗೆ ಹಾಗೂ ವೃದ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಂಡು ನಿಗದಿತ ಸ್ಥಳಕ್ಕೆ ಬಿಡಬೇಕು ಹಾಗೂ ರಸ್ತೆಯ ಮೇಲೆ ಪಾರ್ಕಿಂಗ್ ಸ್ಥಳದಲ್ಲೆ ನಿಮ್ಮ ವಾಹನ ನಿಲ್ಲಿಸಬೇಕು ಎಂದು ಹೇಳಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಶ್ರೀ ಪ್ರವೀಣಕುಮಾರ ಎನ್.ಎಸ್. ಅವರು ಮಾತನಾಡಿ ಅಪಘಾತ ರಹಿತ ಬೀದರ ಚಾಲಕರು ರಾಜ್ಯಾಧ್ಯಾಂತ ಹೆಸರುವಾಸಿ ಮಾಡಬೇಕು ಮತ್ತು ಆಟೋದಲ್ಲಿ ಧ್ವನಿ ಮುದ್ರಕ ಹಾಗೂ ಮೋಬೈಲ್ ಹಾಗೂ ಮಧ್ಯಪಾನ ಮಾಡಿ ಚಲಾಯಿಸಬಾರದು ಎಂದು ಹೇಳಿದರು.
ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀಮತಿ ಶೀಲಾದೇವಿ ಎಸ್.ಎಂ. ಅವರು ಮಾತನಾಡಿ ಆಟೋ ಚಾಲಕರ ಸೇವೆ ಅಮೂಲ್ಯವಾಗಿದ್ದು, ಇವರು ಹಗಲು-ರಾತ್ರಿ ಎನ್ನದೆ ಹಾಗೂ ಮಳೆ-ಚಳೆ ಇಲ್ಲದೆ ಸಾರ್ವಜನಿಕರ ಸೇವೆ ಮಾಡುತ್ತಿರುವುದು ಒಳ್ಳೆಯದು ಅದೇ ರೀತಿ ಆಟೋ ಚಾಲಕರು ಚಾಲನೆ ಮಾಡುವಾಗ ಎಲ್ಲಾ ಸಂಚಾರಿ ನಿಯಮಗಳನ್ನು ಪಾಲಿಸಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅಪಘಾತ ರಹಿತ ಆಟೋ ಚಾಲಕರನ್ನು ಸಾರಿಗೆ ಇಲಾಖೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದಾರ, ಬೀದರ ಮೋಟಾರು ವಾಹನ ತರಬೇತಿ ಶಾಲೆಯ ಅಧ್ಯಕ್ಷ ಪ್ರಕಾಶ ಗುಮ್ಮೆ, ಜಿಲ್ಲಾ ಆಟೋ ಚಾಲಕರ ಕಾರ್ಯದರ್ಶಿ ಸೈಯದ ಮಕ್ಸೂದ ಅಲಿ, ಕಛೇರಿಯ ಅಧೀಕ್ಷಕ ಮಲ್ಲಿಕಾರ್ಜುನ ಆಸೆ, ಶಿವಪುತ್ರ ಚವಳೆ, ಸೈಯದ ಕಲೀಮ್, ವೀರೇಂದ್ರ ಎಮ್, ಅರುಣ ಟೇಕರಾಜ್ ಹಾಗೂ ವಾಹನ ತರಬೇತಿ ಶಾಲೆಯ ಪ್ರಾಚಾರ್ಯರರು ಹಾಗೂ ಕಛೇರಿಯ ಸಿಬ್ಬಂಧಿಗಳು ಹಾಜರಿದ್ದರು.