ಆಟೋ ಚಾಲಕರಿಂದ ಮನವಿ ಸ್ವೀಕರಿಸಿದ ಲಾಡ್

ಹುಬ್ಬಳ್ಳಿ, ಜು. ೩೧: ಆಟೋ ಚಾಲಕರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶಕ್ತಿ ಯೋಜನೆ ವಿರೋಧಿಸಿ ಆಟೋ ಚಾಲಕರು ಹಾಗೂ ಮಾಲೀಕರು ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಂದು ಆಟೋ ಸಂಚಾರ ಬಂದ್ ಮಾಡಿ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿ ಆಟೋ ಚಾಲಕರ ಬೇಡಿಕೆಗಳನ್ನು ಆಲಿಸಿ ನಂತರ ಮಾತನಾಡಿದ ಅವರು, ಸಾರಿಗೆ ಸಚಿವರ ಸಭೆಯಲ್ಲಿ ಏನು ತೀರ್ಮಾನವಾಗುತ್ತದೆ ಕಾದು ನೋಡಬೇಕು. ಸರ್ಕಾರದ ಪ್ರತಿನಿಧಿಯಾಗಿ ನಾನು ಮನವಿ ಸ್ವೀಕರಿಸಿದ್ದೇನೆ, ಮುಂದಿನ ತೀರ್ಮಾನವನ್ನು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತೆಗೆದುಕೊಳ್ಳಲಿದ್ದಾರೆ ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಮಾತನಾಡಿ ಶಕ್ತಿ ಯೋಜನೆಯಿಂದಾಗಿ ನಾವು ಜೀವನ ನಡೆಸುವುದು ಕಷ್ಟಕರವಾಗಿದ್ದು, ಈ ನಿಟ್ಟಿನಲ್ಲಿ ನಗರ ಪ್ರದೇಶದ ೨೦ ಕಿಲೋ ಮೀಟರ್ ಒಳಗೆ ಶಕ್ತಿ ಯೋಜನೆಗೆ ಅವಕಾಶ ನೀಡಬಾರದು. ಇದಲ್ಲದೆ ನಮ್ಮ ವಿವಿಧ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಹಾಗೂ ಎಲ್ಲಾ ಆಟೋ ಚಾಲಕರಿಗೆ ಕಾರ್ಮಿಕರ ಕಾರ್ಡ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಶಕ್ತಿ ಯೋಜನೆ ವಿರೋಧಿಸಿ ಹು-ಧಾ ಅವಳಿನಗರದಲ್ಲಿ ಆಟೋಗಳ ಸಂಚಾರ ಸ್ಥಗಿತಗೊಳಿಸಿ, ನಗರದ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಎಂದಿನಂತೆ ಆಟೋರಿಕ್ಷಾಗಳ ಭರಾಟೆಯಿಂದ ಕೂಡಿರುತ್ತಿದ್ದ ರಸ್ತೆಗಳಲ್ಲಿ ಆಟೋರಿಕ್ಷಾಗಳಿಲ್ಲದೆ ರಸ್ತೆಗಳು ಕೊಂಚ ಖಾಲಿಯಾಗಿದ್ದುದು ಕಂಡು ಬಂತು.