ಆಟೋ ಚಾಲಕರನ್ನ ರಾಜನನ್ನಾಗಿ ಮಾಡಿದ ಶಂಕರನಾಗ: ಕಂಬಳೇಶ್ವರಶ್ರೀ

ವಾಡಿ:ನ.12:ಆಟೋ ಚಾಲಕರೆಂದರೆ ಕೀಳಾಗಿ ನೋಡುವ ಕಾಲವಂದಿತ್ತು. ಆದರೆ, ಆಟೋ ಚಾಲಕರನ್ನ ರಾಜನನ್ನಾಗಿ ಮೆರೆದಾಡುವಂತೆ ಮಾಡಿದ ಕೀರ್ತಿ ನಟ, ನಿರ್ಮಾಪಕ ದಿ. ಶಂಕರನಾಗ ಅವರಿಗೆ ಸಲ್ಲುತ್ತದೆ ಎಂದು ಚಿತ್ತಾಪೂರ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣ ಸಮೀಪÀದ ರಾವೂರ ಗ್ರಾಮದಲ್ಲಿ ಶಂಕರನಾಗ ಆಟೋ ಚಾಲಕರ ಸಂಘದ ವತಿಯಿಂದ ಶಂಕರನಾಗ ಅವರ 68ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡುತ್ತಾ, ಹೆಸರು ಮಾಡಲು ಇಂತಹದ್ದೇ ರಂಗ ಅಂತಾ ಬೇಕಾಗಿಲ್ಲ. ಸಮಾಜಮುಖಿಯಾಗಿ ಕೆಲಸ ಮಾಡುವ ವ್ಯಕ್ತಿ ಜನರ ಮನದಲ್ಲಿ ಶಾಶ್ವತ ನೆಲೆಯುರುತ್ತಾನೆ. ಆಟೋ ಚಾಲಕರು ಪ್ರಮಾಣಿಕ ಸೇವೆಯಿಂದ ಜನಮನ ಗೆಲ್ಲುವ ಪ್ರಬಲ ಶಕ್ತಿಯಾಗಬೇಕು. ಅನಾಥರ, ಬಡÀಪರ, ಅನ್ಯಾಯವನ್ನು ಪ್ರತಿಭಟಿಸುವ, ಸಮಾಜಮುಖಿ ಸೇವೆಯ ಚಲನಚಿತ್ರ ಹಾಗೂ ಹಾಡಿನ ಮೂಲಕ ಶಂಕರನಾಗ ಹೆಸರು ಮಾಡಿದ್ದಾರೆ. ಅದೇ ಮಾರ್ಗದಲ್ಲಿ ನೀವೆಲ್ಲರು ಸಾಗಬೇಕೆಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾಜಿ ಜಿಪಂ ಸದಸ್ಯ ಗುಂಡಣ್ಣ ಬಾಳಿ ಮಾತನಾಡಿ, ತಂದೆ-ತಾಯಿಗಳನ್ನು ಮುಟ್ಟದ ಈ ಕಾಲದಲ್ಲಿ ಅನಾಥರ ಕ್ಷೌರ-ಮುಂಡನ, ಸ್ನಾನ ಮಾಡಿಸುವುದು, ಬೇರೆ ಕಡೆ ಹೋಗುವ ಜನ ರಾತ್ರಿಯಾಗಿ ಯಾವುದೇ ವಾಹನ ಸಿಗದಿದ್ದಾಗ ತನ್ನ ವಾಹನದಲ್ಲಿ ಕರೆದುಕೊಂಡು ಅವರ ಮನೆಗೆ ತಲುಪಿಸುವ ಕೆಲಸ ಸಾಂಗ್ಲಿಯಾನ ಅಂಬ್ರೇಶ ಮಾಡುತ್ತಿದ್ದಾರೆ. ಸಮಾಜಮುಖಿ ಕೆಲಸ ಮಾಡಲು ದೇವರು ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಹೇಳಿದರು.

ಶಹಾಬಾದ ಮಠದ ಶ್ರೀಶಂಕ್ರಯ್ಯಾ ಸ್ವಾಮೀಜಿ, ವಕೀಲರಾದ ಮಲಿಕಪಾಶಾ ಮೌಜನ್ ಮಾತನಾಡಿದರು. ಶಂಕರನಾಗ ಆಟೋ ಚಾಲಕರ ಸಂಘದ ಅಧ್ಯಕ್ಷ ಅಂಬ್ರೇಶ ಸಾಂಗ್ಲಿಯಾನ್, ಅಶೋಕ ವಗ್ಗರ, ರಾಘವೇಂದ್ರ ಹೂಗಾರ, ಗುರು ಗುತ್ತೇದಾರ, ಕೃಷ್ಣ ಬೋಮ್ಮಣ, ಸೋಮು ಮಠಪತಿ, ಈರಣ್ಣ ಕಲ್ಯಾಣಿ, ಗೋವಿಂದ ಚಟಗೇರಿ, ರಾಘವೇಂದ್ರ ತಳವಾರ, ವೀರೇಶ ದೇಸಾಯಿ, ಶರಣು ಪಾಟೀಲ್, ರಾಜಾ ಪಟೇಲ್, ಅಶೋಕ ಬಾಲಿ, ವಿಶ್ವನಾಥ, ಬಸವರಾಜ ಯರಗಲ್, ಖಾಜಾಪಟೇಲ್, ಬಾಬು, ಚಂದ್ರು, ಸಿದ್ದು ಸೇರಿದಂತೆ ಅನೇಕರು ಇದ್ದರು. ಬೆಂಗಳೂರಿನ ಖ್ಯಾತ ಕಲಾವಿದ ಜೂನಿಯರ ಶಂಕರನಾಗ ಅವರ ಪಾತ್ರ ನೋಡುಗರ ಗಮನ ಸೆಳೆಯಿತ್ತು. ಹಾಸ್ಯ ಕಲಾವಿದ ರಾಚಯ್ಯಾಸ್ವಾಮೀ ಅವರಿಂದ ನೆರೆದಿದ್ದ ಜನರ ಹೊಟ್ಟೆ ಹುಣ್ಣಗಿಸುವಂತೆ ನಕ್ಕಿಸಿದರು. ಕರವೇ ಅಧ್ಯಕ್ಷ ಗೊಲ್ಲಾಳಪ್ಪ ಪೂಜಾರಿ ನಿರೂಪಿಸಿದರು.