ಆಟೋ ಚಾಲಕನ ಶವಕ್ಕಾಗಿ ಮುಂದುವರೆದ ಶೋಧ

ತುಮಕೂರು, ಜು. ೧೮- ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಪತ್ತೆಯಾಗದ ಕಾರಣ ಇಂದು ಸಹ ಎನ್‌ಡಿಆರ್‌ಎಫ್ ತಂಡದಿಂದ ಶವದ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಕಳೆದ ಮೂರು ದಿನಗಳಿಂದ ಆಟೋ ಚಾಲಕ ಶವ ಹುಡುಕಾಟ ನಡೆದಿದ್ದು, ಇದುವರೆಗೂ ಮೃತದೇಹ ಮಾತ್ರ ಪತ್ತೆಯಾಗಿಲ್ಲ.
ನಿನ್ನೆ ಮಧ್ಯಾಹ್ನ ಸಹ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಶವದ ಹುಡುಕಾಟದ ಕಾರ್ಯಾಚರಣೆಗೆ ತೊಡಕಾಗಿತ್ತು.
ಮೂರನೇ ದಿನವಾದ ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಮುಂದುವರೆಸಿರುವ ಎನ್‌ಡಿಆರ್‌ಎಫ್ ತಂಡ ಮತ್ತೊಮ್ಮೆ ರಾಜಕಾಲುವೆಯ ಕೊಳವೆ ಮಾರ್ಗದಲ್ಲಿ ಭೀಮಸಂದ್ರದವರೆಗೆ ಹುಡುಕಾಟ ನಡೆಸುವ ಆಟೋ ಚಾಲಕನ ಶವ ಪತ್ತೆಗಾಗಿ ಹರಸಾಹಸ ನಡೆಸಿದೆ.
ಶವದ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನಿನ್ನೆ ಚಪ್ಪಲಿಗಳು ದೊರೆತಿವೆ ಎನ್ನಲಾಗಿದೆ. ಆದರೆ ಶವ ಮಾತ್ರ ಪತ್ತೆಯಾಗಿಲ್ಲ. ಇದು ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿದೆ.
ಈಗಾಲೇ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಆಟೋ ಚಾಲಕ ಮೃತದೇಹ ಪತ್ತೆಯಾಗುವವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಮೃತ ದೇಹ ಪತ್ತೆಯಾದ ನಂತರ ಸರ್ಕಾರದಿಂದ ದೊರೆಯುವ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಹೇಳಿದ್ದಾರೆ.
ಇಂದು ಸಹ ಜಿಲ್ಲಾಡಳಿತ, ಮಹಾ ನಗರ ಪಾಲಿಕೆ, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಎನ್‌ಡಿಆರ್‌ಎಫ್ ತಂಡದ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.