ಆಟೋ ಚಾಲಕನ ಶವಕ್ಕಾಗಿ ಎನ್‌ಡಿಆರ್‌ಎಫ್ ತಂಡದಿಂದ ತೀವ್ರ ಶೋಧ

ತುಮಕೂರು, ಜು. ೧೭- ನಗರದಲ್ಲಿ ನಿನ್ನೆ ಮಧ್ಯಾಹ್ನ ಸುರಿದ ಭಾರೀ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಶವ ಪತ್ತೆಗಾಗಿ ಎನ್‌ಡಿಆರ್‌ಎಫ್ ತಂಡದಿಂದ ತೀವ್ರ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ನಗರದಲ್ಲಿ ನಿನ್ನೆ ಮಧ್ಯಾಹ್ನ ಭಾರೀ ಮಳೆ ಸುರಿಯಿತು. ಆ ಸಂದರ್ಭದಲ್ಲಿ ರಿಂಗ್ ರಸ್ತೆಯ ಧಾನಃಪ್ಯಾಲೇಸ್ ಬಳಿ ರೈಲ್ವೆ ಅಂಡರ್‌ಪಾಸ್ ಸಮೀಪ ಆಟೋದಲ್ಲಿ ತೆರಳಿದ ಚಾಲಕ ಹಾಗೂ ಮರಳೂರು ದಿಣ್ಣೆಯ ನಿವಾಸಿ ಅಮ್ಜದ್ ಖಾನ್ (೪೩) ಆಟೋವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಮಳೆ ನೀರು ಹರಿಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಸಲುವಾಗಿ ವಿಡಿಯೋ ಮಾಡಲು ಬಂದಿದ್ದಾರೆ.
ಆ ಸಂದರ್ಭದಲ್ಲಿ ಮಳೆ ನೀರು ಹರಿಯುತ್ತಿದ್ದ ರಭಸಕ್ಕೆ ಸಿಲುಕಿ ಬಾಯ್ತೆರೆದಿದ್ದ ಚರಂಡಿಯ ಕೊಳವೆ ಒಳಗೆ ಕೊಚ್ಚಿ ಹೋಗಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಆಟೋ ಚಾಲಕ ಶವ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸಿದರಾದರೂ ಶವ ಪತ್ತೆಯಾಗಲಿಲ್ಲ.
ಘಟನೆಯ ಸುದ್ದಿ ತಿಳಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಕೂಡಲೇ ಎನ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಿ ತಕ್ಷಣ ನಗರಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು.
ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ರಾತ್ರಿ ೮.೩೦ಕ್ಕೆ ನಗರಕ್ಕೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡದವರು ಇಂದು ಬೆಳಿಗ್ಗೆ ೬.೩೦ ರಿಂದ ಶವ ಪತ್ತೆಯಾಗಿ ಶೋಧನಾ ಕಾರ್ಯಾಚರಣೆಯನ್ನು ಆರಂಭಿಸಿದರು. ಎನ್‌ಡಿಆರ್‌ಎಫ್ ತಂಡ ಡ್ರೋಣ್ ಮೂಲಕ ಸಹ ಶವದ ಹುಡುಕಾಟ ನಡೆಸಿದೆ.
ರೈಲ್ವೆ ಅಂಡರ್‌ಪಾಸ್ ಕೆಳಗಿನ ಬಾಯ್ತೆರೆದಿದ್ದ ಚರಂಡಿ ಕೊಳವೆ ಒಳ ಭಾಗದಲ್ಲೂ ಶೋಧ ಕಾರ್ಯ ನಡೆಸಿರುವ ಎನ್‌ಡಿಆರ್‌ಎಫ್ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೀಮಸಂದ್ರದ ಕೊಳಚೆ ನೀರು ಸಂಸ್ಕರಣಾ ಘಟಕದವರೆಗೂ ತೆರಳಿ ಹುಡುಕಾಟ ನಡೆಸಿದ್ದಾರೆ. ಆದರೂ ಶವ ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಬೆಳಿಗ್ಗೆ ೬.೩೦ ರಿಂದ ನಡೆಯುತ್ತಿರುವ ಶವ ಶೋಧನಾ ಕಾರ್ಯ ಮಧ್ಯಾಹ್ನ ೧೨.೩೦ ಗಂಟೆಯಾದರೂ ನಡೆದಿತ್ತು.
ಸ್ಥಳದಲ್ಲಿ ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಹೆಚ್.ಡಿ. ಮಂಜುನಾಥ್, ತಿಲಕ್‌ಪಾರ್ಕ್ ಇನ್ಸ್‌ಪೆಕ್ಟರ್ ನವೀನ್ ಮೊಕ್ಕಾಂ ಹೂಡಿ ಕಾರ್ಯಾಚರಣೆ ತ್ವರಿತ ಗತಿಯಲ್ಲಿ ನಡೆಯಲು ಸಹಕಾರ ನೀಡಿದ್ದಾರೆ.